ಮಕ್ಕಳಲ್ಲಿ ಬೊಜ್ಜು ಮತ್ತು ಮಾನಸಿಕ ಸ್ವಾಸ್ಥದ ನಡುವಿನ ನಂಟಿನ ಬಗ್ಗೆ ನಿಮಗೆ ಗೊತ್ತೇ....?
ಇಂದು ಮನೆಯಿಂದ ಹೊರಗೆ ಆಟವಾಡುವ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಲೇ ಇದೆ. ಮಕ್ಕಳಿಗಾಗಿ ಹಲವಾರು ಆಟಗಳು ಲಭ್ಯವಿವೆಯಾದರೂ ವಿಶ್ವಾದ್ಯಂತ ಗುಂಡಗಿರುವ ಮಕ್ಕಳ ಸಂಖ್ಯೆ ಹೆಚ್ಚುತ್ತಲೇ ಇದೆ. ಇದಕ್ಕೆ ಹೆಚ್ಚುತ್ತಿರುವ ಅಧಿಕ ಕ್ಯಾಲೊರಿಗಳನ್ನು ಒಳಗೊಂಡಿರುವ ಸಂಸ್ಕರಿತ ಆಹಾರದ ಸೇವನೆ ಮತ್ತು ಜಡ ಜೀವನಶೈಲಿ ಸೇರಿದಂತೆ ಹಲವಾರು ಕಾರಣಗಳಿರಬಹುದು. ಮಕ್ಕಳು ಬೆಳೆಯುವ ವಯಸ್ಸಿನಲ್ಲಿ ಅನಾರೋಗ್ಯಕರ ಜೀವನ ಶೈಲಿಯು ಹಲವಾರು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಇಂದು ಬೊಜ್ಜು ಇಂತಹ ಪ್ರಮುಖ ಸಮಸ್ಯೆಗಳಲ್ಲಿ ಒಂದಾಗಿದೆ. ಒಂದು ಸಮಸ್ಯೆ ಇನ್ನೊಂದಕ್ಕೆ ಕಾರಣವಾಗುವಂತೆ ಬೊಜ್ಜು ಶರೀರ ಹೊಂದಿರುವ ಮಕ್ಕಳು ಸಾರ್ವಜನಿಕ ಸ್ಥಳಗಳಲ್ಲಿ ಆಗಾಗ್ಗೆ ಒತ್ತಡದ ಸ್ಥಿತಿಯನ್ನು ಎದುರಿಸುತ್ತಿರುತ್ತಾರೆ.
ತಮ್ಮ ದೈಹಿಕ ನೋಟದಿಂದಾಗಿ ಮಕ್ಕಳು ಎದುರಿಸಬೇಕಾದ ಸ್ಥಿತಿಗಳಿಂದಾಗಿ ಅವರ ಮಾನಸಿಕ ಆರೋಗ್ಯದ ಮೇಲೆಯೂ ಖಂಡಿತವಾಗಿ ಪರಿಣಾಮ ಉಂಟಾಗುತ್ತದೆ. ಬೊಜ್ಜು ಮತ್ತು ಖಿನ್ನತೆ ನಡುವೆ ಸ್ಪಷ್ಟವಾದ ನಂಟಿಲ್ಲ ಎಂದು ಸಂಶೋಧನೆಗಳು ತೋರಿಸಿವೆಯಾದರೂ ಬೊಜ್ಜು ಶರೀರವು ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಪರಿಣಾಮವನ್ನಂತೂ ಬೀರುತ್ತದೆ ಎನ್ನುವುದು ಕಟು ವಾಸ್ತವವಾಗಿದೆ.
ಬೊಜ್ಜು ದೇಹವನ್ನು ಹೊಂದಿರುವ ಮಕ್ಕಳಲ್ಲಿ ಹಲವಾರು ಕಾಯಿಲೆಗಳು ಮತ್ತು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಈ ಪೈಕಿ ಮೊದಲನೆಯದು ಮತ್ತು ಅತ್ಯಂತ ಮುಖ್ಯವೆಂದರೆ ಬೊಜ್ಜು ಮಕ್ಕಳು ಟೈಪ್ 2 ಮಧುಮೇಹಕ್ಕೆ ಗುರಿಯಾಗುವ ಅಪಾಯವನ್ನು ನಾಲ್ಕು ಪಟ್ಟು ಹೆಚ್ಚಿಸುತ್ತದೆ. ಅಲ್ಲದೆ ಗೊತ್ತುಗುರಿಯಿಲ್ಲದ ನಿದ್ರೆಯ ಕ್ರಮ,ನಿರಂತರ ದಣಿವು ಮತ್ತು ನಿಶ್ಶಕ್ತಿ ಇವೂ ಸಮಸ್ಯೆಗಳಿಗೆ ತಮ್ಮ ಕೊಡುಗೆಗಳನ್ನು ಸಲ್ಲಿಸುತ್ತವೆ.
ವಯಸ್ಕರಲ್ಲಿ ಮಾತ್ರವಲ್ಲ,ಮಕ್ಕಳಲ್ಲಿಯೂ ಬೊಜ್ಜು ಖಿನ್ನತೆ,ಆಹಾರ ಸೇವನೆಯಲ್ಲಿ ಅನಿಯಮತನ,ಶರೀರದ ಆಕಾರದಲ್ಲಿ ವ್ಯತ್ಯಾಸ ಮತ್ತು ಆತ್ಮವಿಶ್ವಾಸ ಕುಸಿತ ಸೇರಿದಂತೆ ಹಲವಾರು ದೈಹಿಕ-ಮಾನಸಿಕ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಬೊಜ್ಜು ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳ ನಡುವಿನ ಸಂಬಂಧವು ಸಂಕೀರ್ಣವಾಗಿದೆ. ಇವೆರಡರ ನಡುವಿನ ಸಂಬಂಧಗಳ ಬಗ್ಗೆ ಹಲವಾರು ಸಿದ್ಧಾಂತಗಳಿವೆ. ಬೊಜ್ಜು ಮಕ್ಕಳಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ ಎಂದು ಕೆಲವು ಸಂಶೋಧಕರು ಹೇಳಿದರೆ, ಮಕ್ಕಳು ಸುಲಭವಾಗಿ ಬೊಜ್ಜಿಗೆ ಗುರಿಯಾಗುತ್ತಾರೆ ಎಂದು ಇನ್ನು ಕೆಲವರು ಹೇಳಿದ್ದಾರೆ.
ಬೊಜ್ಜು ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳು ವಿಶ್ವದಲ್ಲಿ ಗಣನೀಯ ಕಾಯಿಲೆಗಳಿಗೆ ಕಾರಣವಾಗಿವೆ. ಬಾಲಕರಿಗೆ ಹೋಲಿಸಿದರೆ ಅತಿಯಾದ ದೇಹತೂಕ ಮತ್ತು ಬೊಜ್ಜು ಹೆಣ್ಣುಮಕ್ಕಳನ್ನು ಹೆಚ್ಚಿನ ಸಮಸ್ಯೆಗಳಿಗೆ ತಳ್ಳುತ್ತದೆ. ಮಕ್ಕಳಲ್ಲಿ ಮತ್ತು ವಯಸ್ಕರಲ್ಲಿ ವಾಸ್ತವ ಬೊಜ್ಜಿಗಿಂತ ತಾವು ಬೊಜ್ಜು ಹೊಂದಿದ್ದೇವೆ ಎಂಬ ಚಿಂತೆಯೇ ಹೆಚ್ಚಿನ ಮಾನಸಿಕ ಅಸ್ವಸ್ಥತೆಗಳಿಗೆ ಕಾರಣವಾಗುತ್ತದೆ.
ಹೆಚ್ಚುತ್ತಿರುವ ವೈದ್ಯಕೀಯ ಸಮಸ್ಯೆಗಳು ಮತ್ತು ಬೊಜ್ಜಿನೊಂದಿಗೆ ಗುರುತಿಸಿಕೊಂಡಿರುವ ಚಲನವಲನ ನಿರ್ಬಂಧಗಳು ಮಾನಸಿಕ ಆರೋಗ್ಯದ ಮೇಲೆ ನೇರ ಪರಿಣಾಮಗಳನ್ನು ಹೊಂದಿರುವುದು ಕಂಡುಬಂದಿದೆ. ಬೊಜ್ಜು ಹೊಂದಿರುವ ಮಕ್ಕಳು ಓಟ,ಜಿಗಿತ ಇತ್ಯಾದಿ ಅಗತ್ಯ ದೈಹಿಕ ಕಸರತ್ತುಗಳನ್ನು ಮಾಡುವುದರಲ್ಲಿ ತಮ್ಮ ಅಸಾಮರ್ಥ್ಯದಿಂದಾಗಿ ತಂಡದಲ್ಲಿ ಹೆಚ್ಚುವರಿ ಆಟಗಾರನಾಗಿ ಒಂದು ಮೂಲೆಯಲ್ಲಿ ಕುಳಿತುಕೊಂಡಿರವುದನ್ನು ನಾವು ಆಗಾಗ್ಗೆ ನೋಡುತ್ತಿರುತ್ತೇವೆ. ಇಂತಹ ಮಿತಿಗಳು ಮಕ್ಕಳಲ್ಲಿ ತಾನು ನಿರುಪಯುಕ್ತನೆಂಬ ಭಾವನೆ,ಮುನಿಸು ಮತ್ತು ನೋವನ್ನುಂಟು ಮಾಡುತ್ತವೆ ಮತ್ತು ಇವು ಮಾನಸಿಕ ಆರೋಗ್ಯದ ಮೇಲೆ ಪರಿಣಾಮವನ್ನುಂಟು ಮಾಡುತ್ತವೆ.
ದೈಹಿಕ ಕ್ಷಮತೆ ಮತ್ತು ಉತ್ತಮ ಆರೋಗ್ಯ ಜೊತೆಜೊತೆಯಾಗಿ ಸಾಗುತ್ತಿರುವ ಇಂದಿನ ದಿನಗಳಲ್ಲಿ ಬೊಜ್ಜು ಮತ್ತು ವಿವಿಧ ಮಾನಸಿಕ ಆರೋಗ್ಯ ಕಿರಿಕಿರಿಗಳಂತಹ ಸಮಸ್ಯೆಗಳನ್ನು ಯಶಸ್ವಿಯಾಗಿ ಎದುರಿಸುವ ಬಗ್ಗೆ ಕಿರಿಯ ಪೀಳಿಗೆಗೆ ಹಿರಿಯರ ಮಾರ್ಗದರ್ಶನ ಅಗತ್ಯವಾಗಿದೆ. ಅಂತಹ ಕೆಲವು ಸರಳ ಕ್ರಮಗಳು ಇಲ್ಲಿವೆ.
ಪಾಲಕರು ಸಂಜೆಯ ವೇಳೆಯಲ್ಲಿ ಹೊರಗಡೆ ಆಟವಾಡುವಂತೆ ಮಕ್ಕಳನ್ನು ಪ್ರೇರೇಪಿಸಬೇಕು.ಮಕ್ಕಳು ಸೆಲ್‌ಫೋನ್‌ಗಳನ್ನು ಬಳಸುವುದನ್ನು ಕಡಿಮೆಗೊಳಿಸಬೇಕು ಅಥವಾ ಸಂಪೂರ್ಣವಾಗಿ ನಿಲ್ಲಿಸಬೇಕು. ಅವರು ಆರೋಗ್ಯಯುತವಾಗಿ ಬೆಳೆಯುವಂತಾಗಲು ಆರೋಗ್ಯಕರ ಆಹಾರಗಳನ್ನು ಸೇವಿಸುವಂತೆ ನೋಡಿಕೊಳ್ಳಬೇಕು. ಶಾಲೆಯಲ್ಲಿ ಅಥವಾ ಮನೆಯಲ್ಲಿ ಮಕ್ಕಳ ದಿನಚರಿಯ ಕುರಿತು ಆಗಾಗ್ಗೆ ಅವರೊಂದಿಗೆ ಮಾತುಕತೆಯಲ್ಲಿ ತೊಡಗಿಸಿಕೊಳ್ಳಬೇಕು.