ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: ಗೊಂದಲಕ್ಕೆ ಕಾರಣವಾದ ಫಲಿತಾಂಶ ಪ್ರಕಟಣೆಯಲ್ಲಿ ವಿಳಂಬ

ಉಡುಪಿ, ಮೇ 23: ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮತ ಎಣಿಕೆ ಪ್ರಕ್ರಿಯೆ ವಿಳಂಬವಾಗಿ ಆರಂಭಗೊಂಡ ಹಿನ್ನೆಲೆಯಲ್ಲಿ ಮೊದಲ ಸುತ್ತಿನ ಫಲಿತಾಂಶವನ್ನು ತಡವಾಗಿ ಪ್ರಕಟಿಸಲಾಗಿದ್ದು, ಈ ಅಡಚಣೆಯಿಂದ ಕೇಂದ್ರ ದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.
ಬೆಳಗ್ಗೆ 7:30ರ ಸುಮಾರಿಗೆ ಮತಯಂತ್ರಗಳನ್ನು ಇರಿಸಿದ್ದ ಸ್ಟ್ರಾಂಗ್ ರೂಂ ನ್ನು ತೆರೆಯಲು ಸಿದ್ಧತೆ ನಡೆಸಿದ್ದರೂ ಆ ಪ್ರಕ್ರಿಯೆ ಮುಗಿಸಿ ಅಂಚೆ ಮತ ಎಣಿಕೆ ಕಾರ್ಯ ಆರಂಭಿಸಲು ತಡವಾಯಿತು. ಇದರಿಂದ 8:30ರ ಸುಮಾರಿಗೆ ಆರಂಭಗೊಳ್ಳಬೇಕಾದ ಮತ ಎಣಿಕೆ ಕಾರ್ಯ ವಿಳಂಬವಾಯಿತ್ತೆನ್ನಲಾಗಿದೆ.
ಇದರ ಪರಿಣಾಮ ಬೆಳಗ್ಗೆ 9:30ರವರೆಗೂ ಮೊದಲ ಸುತ್ತಿನ ಫಲಿತಾಂಶ ವನ್ನು ಆಯೋಗದ ಅಧಿಕೃತ ವೆಬ್‌ಸೈಟ್ ಆಗಲಿ, ಮೊಬೈಲ್ ಆ್ಯಪ್‌ಗಳಲ್ಲಿ ಅಥವಾ ಮೈಕ್‌ನಲ್ಲಿ ಆಗಲಿ ಘೋಷಣೆ ಮಾಡಿರಲಿಲ್ಲ. ಸರಿಯಾದ ಮಾಹಿತಿ ನೀಡದ ಚುನಾವಣಾಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಮಾಧ್ಯಮ ದವರು, ಮತ ಎಣಿಕಾ ಕೇಂದ್ರದ ಪ್ರವೇಶದ್ವಾರದ ಬಳಿ ತೆರಳಿ ಪೊಲೀಸ್ ಅಧಿಕಾರಿಗಳಲ್ಲಿ ಈ ಕುರಿತು ಪ್ರಶ್ನಿಸಿದರು. ಬಳಿಕ ಸ್ಥಳಕ್ಕೆ ಆಗಮಿಸಿದ ಅಧಿಕಾರಿ ಗಳು ಎಣಿಕೆ ಕಾರ್ಯದಲ್ಲಿ ಆಗಿರುವ ವಿಳಂಬದ ಬಗ್ಗೆ ಸ್ಪಷ್ಟನೆ ನೀಡಿದರು.
ಬಳಿಕ 9:45ರ ಸುಮಾರಿಗೆ ಚುನಾವಣಾ ಆಯೋಗ ವೆಬ್‌ಸೈಟ್‌ನಲ್ಲಿ ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಫಲಿತಾಂಶದ ಮಾಹಿತಿಯನ್ನು ಪ್ರಕಟಿಸ ಲಾಯಿತು. ಅದರ ನಂತರ ಸುಮಾರು 10:45ಕ್ಕೆ ಜಿಲ್ಲಾಧಿಕಾರಿ ಹೆಫ್ಸಿಬಾ ರಾಣಿ ಕೊರ್ಲಪಾಟಿ ಸ್ವತಃ ತಾವೇ ಮೈಕ್‌ನಲ್ಲಿ ಮೊದಲ ಸುತ್ತಿ ಫಲಿತಾಂಶವನ್ನು ಪ್ರಕಟಿಸಿದರು.
ಶೋಭಾ ಕರಂದ್ಲಾಜೆ ಆಗಮನ: ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಇಂದು ಬೆಳಗ್ಗೆ ಬಿಜೆಪಿ ಮತ ಎಣಿಕಾ ಏಜೆಂಟರ್‌ಗಳ ಜೊತೆ ಬಿಜೆಪಿ ಕಚೇರಿ ಯಲ್ಲಿ ಉಪಹಾರ ಸೇವಿಸಿ, ಬಳಿಕ ಅಂಬಲಪಾಡಿ ಹಾಗೂ ಶ್ರೀಕೃಷ್ಣ ಮಠಕ್ಕೆ ತೆರಳಿ ದೇವರ ದರ್ಶನ ಮಾಡಿದರು. ತದನಂತರ ಬಿಜೆಪಿ ಕಚೇರಿಯಲ್ಲಿ ಕುಳಿತು ಟಿವಿಯಲ್ಲಿ ಫಲಿತಾಂಶದ ವೀಕ್ಷಿಸಿದರು.
ಮತದ ಗೆಲುವಿನ ಅಂತರವು ಒಂದು ಲಕ್ಷ ಮೀರುತ್ತಿದ್ದಂತೆಯೇ ಶೋಭಾ ಮಧ್ಯಾಹ್ನ 12:20ರ ಸುಮಾರಿಗೆ ಮತ ಎಣಿಕಾ ಕೇಂದ್ರಕ್ಕೆ ಆಗಮಿಸಿದರು. ಇವರೊಂದಿಗೆ ಬಿಜೆಪಿ ಮುಖಂಡರಾದ ಭಾರತಿ ಶೆಟ್ಟಿ, ಕುತ್ಯಾರ್ ನವೀನ್ ಶೆಟ್ಟಿ, ಗೀತಾಂಜಲಿ ಸುವರ್ಣ, ಸುರೇಶ್ ನಾಯಕ್ ಇದ್ದರು. ಇಂದು ರಾತ್ರಿ ತಾನು ಶೃಂಗೇರಿಗೆ ತೆರಳುತ್ತಿರುವುದಾಗಿ ಶೋಭಾ ತಿಳಿಸಿದರು.
ಜೆಡಿಎಸ್- ಕಾಂಗ್ರೆಸ್ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಬೆಳಗ್ಗೆ 7 ಗಂಟೆ ಸುಮಾರಿಗೆ ಬ್ರಹ್ಮಗಿರಿಯಲ್ಲಿರುವ ಕಾಂಗ್ರೆಸ್ ಭವನಕ್ಕೆ ಆಗಮಿಸಿ ಮತ ಎಣಿಕಾ ಏಜೆಂಟ್‌ಗಳೊಂದಿಗೆ ಸಮಾಲೋಚನೆ ನಡೆಸಿದರು. ಅಲ್ಲಿಂದ ಮನೆಗೆ ತೆರಳಿದ ಅವರು ಪೂಜೆಯಲ್ಲಿ ಪಾಲ್ಗೊಂಡಿದ್ದರು. ಆದರೆ ಅವರು ಕೊನೆಯವರೆಗೂ ಮತ ಎಣಿಕೆಯ ಕೇಂದ್ರದತ್ತ ಬರಲೇ ಇಲ್ಲ.
ಟ್ಯಾಂಕರ್ ಮೂಲಕ ನೀರು: ಕೇಂದ್ರದಲ್ಲಿ ಸಾವಿರಾರು ಸಿಬ್ಬಂದಿಗಳು, ಪೊಲೀಸರು ಹಾಗೂ ಮಾಧ್ಯಮದವರಿಗಾಗಿ ಊಟ, ಉಪಹಾರ ಹಾಗೂ ಶೌಚಾಲಯದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.
ಇಲ್ಲಿಗೆ ಅಗತ್ಯವಾಗಿ ಬೇಕಾದ ನೀರನ್ನು ನಗರಸಭೆಯಿಂದ ಟ್ಯಾಂಕರ್ ಮೂಲಕ ಸರಬರಾಜು ಮಾಡಲಾಯಿತು. ‘ಮೇ 22ರಂದು ಎರಡು ಟ್ರಿಪ್ ನಲ್ಲಿ 12ಸಾವಿರದಂತೆ ಒಟ್ಟು 24ಸಾವಿರ ಲೀಟರ್ ನೀರನ್ನು ಪೂರೈಸಲಾಗಿತ್ತು. ಅದೇ ರೀತಿ ಇಂದು ಕೂಡ ಬೇಡಿಕೆಗೆ ಅನುಗುಣವಾಗಿ ನೀರನ್ನು ಪೂರೈಕೆ ಮಾಡ ಲಾಯಿತು. ಈ ನೀರನ್ನು ಬಜೆಯಿಂದ ತರಲಾಯಿತು’ ಎಂದು ನಗರಸಭೆ ಅಧಿಕಾರಿಗಳು ತಿಳಿಸಿದರು.
ಕೇಂದ್ರದ ಸುತ್ತ ಬಿಗಿ ಭದ್ರತೆ
ಮತ ಎಣಿಕೆಯ ಹಿನ್ನೆಲೆಯ ಬ್ರಹ್ಮಗಿರಿಯ ಸೈಂಟ್ ಸಿಸಿಲಿಸ್ ಶಾಲೆಯಲ್ಲಿ ರುವ ಮತ ಎಣಿಕಾ ಕೇಂದ್ರದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸ ಲಾಗಿತ್ತು. ಅದಕ್ಕಾಗಿ 534 ಪೊಲೀಸರನ್ನು ಹಾಗೂ ಒಂದು ಅರೆ ಮಿಲಿಟರಿ ಪಡೆ ಮತ್ತು ಕೆಎಸ್‌ಆರ್ಪಿ ತುಕಡಿಯನ್ನು ನಿಯೋಜಿಸಲಾಗಿತ್ತು.
ಮತ ಎಣಿಕಾ ಕೇಂದ್ರವಾಗಿರುವ ಶಾಲೆಯ ಮುಖ್ಯ ಗೇಟನ್ನು ಬಂದ್ ಮಾಡಲಾಗಿದ್ದು, ಶಾಲೆಯ ಹಿಂಬದಿಯ ಅಂದರೆ ಅಜ್ಜರಕಾಡು ಸರಕಾರಿ ಆಸ್ಪತ್ರೆಯ ಎದುರಿನ ರಸ್ತೆಯಲ್ಲಿರುವ ಗೇಟನ್ನು ಮುಖ್ಯದ್ವಾರವನ್ನಾಗಿಸಿ ಪಾಸ್ ಇದ್ದವರಿಗೆ ಅಲ್ಲಿಂದಲೇ ಪ್ರವೇಶಕ್ಕೆ ಅವಕಾಶ ನೀಡಲಾಯಿತು.
ಪ್ರತಿಯೊಬ್ಬರನ್ನು ತೀವ್ರ ತಪಾಸಣೆಯ ಬಳಿಕವಷ್ಟೆ ಕೇಂದ್ರದ ಆವರಣದೊಳಗೆ ಬಿಡಲಾಯಿತು. ಜಿಲ್ಲಾಧಿಕಾರಿ, ಎಸ್ಪಿ ಸೇರಿದಂತೆ ಎಲ್ಲ ಅಧಿಕಾರಿಗಳು ಹಾಗೂ ಏಜೆಂಟರುಗಳಿಗೆ ಮೊಬೈಲ್ ತೆಗೆದುಕೊಂಡು ಹೋಗುವುದನ್ನು ನಿಷೇಧಿಸ ಲಾಗಿತ್ತು. ಅದಕ್ಕಾಗಿ ಅಧಿಕಾರಿಗಳ ಮಧ್ಯೆ ಸಂವಹನ ಸಾಧಿಸಲು ವಾಕಿಟಾಕಿ ವ್ಯವಸ್ಥೆ ಮಾಡಲಾಗಿತ್ತು. ಕೇಂದ್ರದ ಮುಖ್ಯ ಗೇಟಿನ ಎದುರಿನ ರಸ್ತೆ ಮತ್ತು ಹಿಂಬದಿಯ ಗೇಟಿನ ಎದುರಿನ ರಸ್ತೆಯಲ್ಲಿ ಸಂಚಾರಕ್ಕೆ ತಡೆಯೊಡ್ಡಸಲಾಗಿತ್ತು. ಆಸ್ಪತ್ರೆ ಎದುರಿನ ರಸ್ತೆಯ ಒಂದು ಬದಿಯಲ್ಲಿ ವಾಹನ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಲಾಗಿತ್ತು.
ಕೇಂದ್ರದ ಬಳಿ ಕಾರ್ಯಕರ್ತರೇ ಇರಲಿಲ್ಲ!
ಶೋಭಾ ಕರಂದ್ಲಾಜೆ ಭಾರೀ ಅಂತರದಲ್ಲಿ ಮುನ್ನಡೆ ಸಾಧಿಸಿದರೂ ಮಧ್ಯಾಹ್ನ 3ಗಂಟೆಯವರೆಗೂ ಮತ ಎಣಿಕೆ ಕೇಂದ್ರದ ಬಳಿ ಯಾವುದೇ ಬಿಜೆಪಿ ಕಾರ್ಯ ಕರ್ತರು ವಿಜಯೋತ್ಸವವನ್ನು ಆಚರಿಸಲೇ ಇಲ್ಲ.
ಸಾಮಾನ್ಯವಾಗಿ ಈ ಹಿಂದಿನ ಎಲ್ಲ ಚುನಾವಣೆಯಲ್ಲೂ ಕೇಂದ್ರದ ಸುತ್ತ 100 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದರೂ ಕೂಡ ಆರಂಭ ದಿಂದಲೇ ಕೇಂದ್ರದ ಸಮೀಪ ಸಹಸ್ರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಜಮಾಯಿಸುತ್ತಿದ್ದರು. ಆದರೆ ಈ ಬಾರಿ ಮಾತ್ರ ಶೋಭಾ ಕರಂದ್ಲಾಜೆ ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಲ್ಲಿ ಮುನ್ನಡೆ ಸಾಧಿಸಿದರೂ ಕೂಡ ಯಾವುದೇ ಕಾರ್ಯಕರ್ತರು ಕೇಂದ್ರದತ್ತ ಸುಳಿದಿರಲೇ ಇಲ್ಲ.
ಕೇಂದ್ರ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ವಿಧಿಸಿರುವುದರಿಂದ ಯಾರು ಕೂಡ ಬಂದಿಲ್ಲ ಎಂದು ಬಿಜೆಪಿ ಕಾರ್ಯಕರ್ತರು ಸಬೂಬು ನೀಡಿದರು.









