ರಕ್ತಚಂದನ ಸಾಗಾಟ: ನಾಲ್ವರ ಬಂಧನ

ಬೆಂಗಳೂರು, ಮೇ 24: ಅಕ್ರಮವಾಗಿ ರಕ್ತಚಂದನ ಸಾಗಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಇಲ್ಲಿನ ತಿರುಮಲಶೆಟ್ಟಿಹಳ್ಳಿ ಪೊಲೀಸರು ಬಂಧಿಸಿ ಸುಮಾರು 62,000 ಮೌಲ್ಯದ ರಕ್ತಚಂದನವನ್ನು ವಶಪಡಿಸಿಕೊಂಡಿದ್ದಾರೆ. ಆಂಧ್ರಪ್ರದೇಶದ ಕಡಪ ಮೂಲದ ನಯಾಝ್(19), ಫಕ್ರುದ್ದೀನ್(22), ಉಸ್ಮಾನ್ ನಯಾಬ್ ಸಾಬ್(27) ಹಾಗೂ ಹೊಸಕೋಟೆಯ ಸಲ್ಮಾನ್ ಖಾನ್(21) ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ಜಡಗೇನಹಳ್ಳಿ ಹೋಬಳಿಯ ಕಟ್ಟಿಗೇನಹಳ್ಳಿ ಗ್ರಾಮದ ಇಂಡೋ ಸನ್‌ರೈಸ್ ಶಾಲೆಯ ಹತ್ತಿರ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದಾಗ ಮಾಲೂರು ಕಡೆಯಿಂದ ಕಟ್ಟಿಗೇನಹಳ್ಳಿ ಕಡೆಗೆ ಬರುತ್ತಿದ್ದ ಮಹೇಂದ್ರ ಮಿನಿ ಗೂಡ್ಸ್ ಚಾಲಕ ಪೊಲೀಸ್‌ರನ್ನು ನೋಡಿ ವಾಹನವನ್ನು ಅತಿವೇಗವಾಗಿ ಚಲಾಯಿಸಿಕೊಂಡು ಹೋಗಲು ಪ್ರಯತ್ನಿಸಿದ್ದಾನೆ.
ಅನುಮಾನಗೊಂಡ ಪೊಲೀಸರು ವಾಹನವನ್ನು ತಡೆದು ಪರಿಶೀಲನೆ ನಡೆಸಿದಾಗ ಸುಮಾರು 62,400 ರೂ. ಬೆಲೆಬಾಳುವ 52 ಕೆಜಿ ತೂಕದ ರಕ್ತಚಂದನವನ್ನು ವಶಪಡಿಸಿಕೊಂಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
Next Story





