ನಾನು ಅನ್ನುವುದಕ್ಕಿಂತ ನಾವು ಎಂಬ ಭಾವನೆ ಬೆಳೆಯಲಿ: ನಟ ಶಿವರಾಜ್ ಕುಮಾರ್

ಬೆಂಗಳೂರು, ಮೇ 24: ಜನರಿಗೆ ಏನೇ ಸಮಸ್ಯೆಗಳಿದ್ದರೂ ಕಲಾವಿದರು ಬಂದೇ ಬರುತ್ತೇವೆ. ಜನರಿಗೆ ಒಳ್ಳೆದಾಗುವುದಾದರೆ ಎಲ್ಲರೂ ಕೈಜೋಡಿಸುವುದರಲ್ಲಿ ತಪ್ಪಿಲ್ಲ. ನಾನು ಅನ್ನುವುದಕ್ಕಿಂತ ನಾವು ಎಂಬ ಭಾವನೆ ನಮ್ಮಲ್ಲಿ ಬೆಳೆಯಬೇಕು ಎಂದು ನಟ ಶಿವರಾಜ್ ಕುಮಾರ್ ಅಭಿಪ್ರಾಯಪಟ್ಟರು.
ಶುಕ್ರವಾರ ಚಾಮರಾಜಪೇಟೆಯ ಕಸಾಪದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಡಾ.ರಾಜ್‌ಕುಮಾರ್ ಸಂಸ್ಕೃತಿ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಜನರನ್ನು ನಂಬಿ ಬದುಕುವವರು ನಾವು. ನಿಮ್ಮೊಂದಿಗೆ ಸದಾ ಇರುತ್ತೇವೆ. ಜನ ಸೇರಿಸಿ ಮಜಾ ಮಾಡಿ ಹೆಸರು ಗಳಿಸುವುದು ಮುಖ್ಯವಲ್ಲ. ನಮ್ಮ ಚಿಂತನೆಗಳು ಕಾರ್ಯಸಾಧುವಾಗಬೇಕು ಎಂದು ಹೇಳಿದರು.
ಜಯಂತಿ ಅವರಿಗೆ ಪ್ರಶಸ್ತಿ ನೀಡಿರುವುದು ಖುಷಿಯ ಸಂಗತಿ. ನಾನು ಚಿಕ್ಕ ವಯಸ್ಸಿನಿಂದ ಅವರನ್ನು ನೋಡುತ್ತಿದ್ದೇನೆ. ಅವರು ನನ್ನ ತಾಯಿ ಇದ್ದಂತೆ. ಚಿಕ್ಕ ವಯಸ್ಸಿನಿಂದಲೇ ಅವರ ಚಲನಚಿತ್ರಗಳನ್ನು ನೋಡಿ ಬೆಳೆದವರು ನಾವು. ಅಪ್ಪಾಜಿ ಅವರನ್ನು ರಾಜ್ ಎಂದು ಹೆಸರಿಡಿದು ಸಂಬೋಧಿಸುತ್ತಿದ್ದವರು. ಅವರು ಆ ರೀತಿ ಕರೆಯುವುದನ್ನು ಕೇಳುವುದೇ ನಮಗೆ ಖುಷಿಯಾಗುತ್ತಿತ್ತು. ಅವರ ಕಲಾಸೇವೆ ಸ್ಮರಣೀಯವಾದುದು ಎಂದು ಭಾವುಕರಾದರು.
ಉತ್ತಮ ಗುರಿ ನಮ್ಮಲ್ಲಿರಬೇಕು. ಹಲವರು ಶಾಸಕರು, ಸಂಸದರಾಗುತ್ತಾರೆ. ನಾವು ಆರಿಸಿ ಕಳಿಸುವ ಜನಪ್ರತಿನಿಧಿಗಳನ್ನು ಧೈರ್ಯದಿಂದ ನೇರವಾಗಿ ಪ್ರಶ್ನಿಸುವಂತಿರಬೇಕು. ಸಮಸ್ಯೆಗಳಿಗೆ ಖಡಕ್ಕಾಗಿ ಸ್ಪಂದಿಸುವಂತಿರಬೇಕು. ಮಾಧ್ಯಮದವರು ಬಣ್ಣ ಹಚ್ಚುವವರು ರಾಜಕೀಯಕ್ಕೆ ಬರಲ್ವಾ ಅನ್ನುತ್ತಾರೆ. ಬಣ್ಣ ಹಚ್ಚುವವರು ರಾಜಕೀಯಕ್ಕೆ ಬಂದು ಏನು ಮಾಡಲು ಸಾಧ್ಯ? ಬಣ್ಣ ಹಚ್ಚುವವರು ದೇಶವನ್ನು ಆಳುತ್ತಿಲ್ಲ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಮನು ಬಳಿಗಾರ್ ಮಾತನಾಡಿ, ಡಾ.ರಾಜ್‌ಕುಮಾರ್ ಕನ್ನಡದ ಕಣ್ಮಣಿ. ಅವರನ್ನು ಸ್ಮರಿಸುವ ಜತೆಗೆ ಅವರ ಜೀವನ ವೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ರಾಜ್ಯದಲ್ಲಿ ಡಾ.ರಾಜ್‌ಕುಮಾರ್ ಸ್ಥಾನ ತುಂಬಲು ಯಾರಿಂದಲೂ ಸಾಧ್ಯವಿಲ್ಲ. ಕಾವೇರಿ ನದಿ ವಿಚಾರದಲ್ಲಿ ರಾಜ್ ಒಂದು ಹೇಳಿಕೆ ನೀಡಿದರೆ ಅದು ಅಲ್ಲಿಗೆ ಅಂತ್ಯ ಕಾಣುತ್ತಿತ್ತು ಎಂದು ಅವರು ನೆನೆದರು.
ಮಹದಾಯಿ ವಿಚಾರದಲ್ಲಿ ಎಲ್ಲಾ ಕಲಾವಿದರು ಒಗ್ಗಟ್ಟಿನಿಂದ ದನಿ ಎತ್ತಿದ್ದಾರೆ. ಚಲನಚಿತ್ರರಂಗ ಒಂದು ಕುಟುಂಬವಿದ್ದಂತೆ. ಯಾವುದೇ ಕಷ್ಟ-ಸುಖವಿದ್ದರೂ ಭಾಗಿಯಾಗುತ್ತೇವೆ. ನಾಡು, ನುಡಿ, ಭಾಷೆಗೆ ಸದಾ ಸ್ಪಂದಿಸುತ್ತೇವೆ. ಪ್ರತಿಯೊಬ್ಬರಿಗೂ ಆತ್ಮವಿಮರ್ಶೆ ಅಗತ್ಯ. -ಶಿವರಾಜ್‌ಕುಮಾರ್, ನಟ








