ಸಂತ್ರಸ್ತರೊಂದಿಗೆ ಹಾರ್ವೆ ವೀನ್‌ಸ್ಟೈನ್ 44 ಮಿಲಿಯ ಡಾಲರ್ ಒಪ್ಪಂದ
ನ್ಯೂಯಾರ್ಕ್, ಮೇ 24: ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಮೊಕದ್ದಮೆಗಳನ್ನು ಎದುರಿಸುತ್ತಿರುವ ಹಾಲಿವುಡ್ ನಿರ್ಮಾಪಕ ಹಾರ್ವೆ ವೀನ್‌ಸ್ಟೈನ್ ತನ್ನ ಸಂತ್ರಸ್ತರು ಮತ್ತು ಸಾಲಗಾರರೊಂದಿಗೆ 44 ಮಿಲಿಯ ಡಾಲರ್ (ಸುಮಾರು 306 ಕೋಟಿ ರೂಪಾಯಿ) ಮೊತ್ತದ ಇತ್ಯರ್ಥ ಒಪ್ಪಂದವೊಂದಕ್ಕೆ ಬಂದಿದ್ದಾರೆ ಎಂದು ‘ವಾಲ್ ಸ್ಟ್ರೀಟ್ ಜರ್ನಲ್’ ಗುರುವಾರ ವರದಿ ಮಾಡಿದೆ.
ಒಪ್ಪಂದವು ಹಾಲಿವುಡ್ ದೈತ್ಯನ ವಿರುದ್ಧ ದಾಖಲಿಸಲಾದ ಎಲ್ಲ ಸಿವಿಲ್ ಮೊಕದ್ದಮೆಗಳಿಗೆ ಅನ್ವಯವಾಗುತ್ತದೆ. ಒಪ್ಪಂದಕ್ಕೆ ಇನ್ನೂ ಸಹಿ ಹಾಕಲಾಗಿಲ್ಲ.
ಒಪ್ಪಂದವು, ಅವರ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದ ಕ್ರಿಮಿನಲ್ ಕಲಾಪಗಳಿಗೆ ಅನ್ವಯಿಸುವುದಿಲ್ಲ. ಈ ಪ್ರಕರಣಗಳಿಗೆ ಸಂಬಂಧಿಸಿದ ಅವರ ವಿಚಾರಣೆ ಸೆಪ್ಟಂಬರ್‌ನಲ್ಲಿ ನಡೆಯಲಿದೆ.
ಇಬ್ಬರು ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪಗಳನ್ನು ವೀನ್‌ಸ್ಟೈನ್ ವಿರುದ್ಧ ಹೊರಿಸಲಾಗಿದೆ. ಅವರ ವಿರುದ್ಧದ ಆರೋಪಗಳು ಸಾಬೀತಾದರೆ ಜೀವಾವಧಿ ಜೈಲು ಶಿಕ್ಷೆಯನ್ನು ಅವರು ಎದುರಿಬಹುದಾಗಿದೆ.
ಹಾಲಿವುಡ್‌ನ ಅತ್ಯಂತ ಪ್ರಭಾವಿ ವ್ಯಕ್ತಿಗಳ ಪೈಕಿ ಒಬ್ಬರಾಗಿದ್ದ ವೀನ್‌ಸ್ಟೈನ್ ವಿರುದ್ಧ 2017ರ ಅಕ್ಟೋಬರ್ ಬಳಿಕ ಹಲವು ಹಾಲಿವುಡ್ ನಟಿಯರು ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಆರೋಪಗಳನ್ನು ಹೊರಿಸಿರುವುದನ್ನು ಸ್ಮರಿಸಬಹುದಾಗಿದೆ. ಅವರ ವಿರುದ್ಧ ಬೃಹತ್ ‘ಮೀ-ಟೂ’ ಆಂದೋಲನವೇ ನಡೆದಿತ್ತು.