ತಾಂತ್ರಿಕ ಯೋಜನಾ ವಸ್ತು ಪ್ರದರ್ಶನಕ್ಕೆ ಚಾಲನೆ

ಬೆಂಗಳೂರು, ಮೇ 24: ನಗರದ ಕೆಂಗೇರಿ ಸಮೀಪದ ವಿವೇಕಾನಂದ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ, ತಾಂತ್ರಿಕ ಯೋಜನಾ ವಸ್ತು ಪ್ರದರ್ಶನಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.
ತಾಂತ್ರಿಕ ಶಿಕ್ಷಣದ ಅಂತಿಮ ವರ್ಷದ ವಿದ್ಯಾರ್ಥಿಗಳು ತಾವು ತಯಾರಿಸುವ ಮಾದರಿಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ತಾಂತ್ರಿಕ ವಸ್ತು ಪ್ರದರ್ಶನದಲ್ಲಿ ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಿಕಲ್ ವಿಭಾಗದ ಮಾದರಿಗಳು, ಮೆಕಾನಿಕಲ್‌ಗೆ ಸಂಬಂಧಿಸಿದಂತೆ ಮಾದರಿ ಸೇರಿದಂತೆ ಹಲವು ಮಾದರಿಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು.
ಈ ಕುರಿತು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಸ.ಅಧ್ಯಾಪಕ ಡಾ.ಅಶ್ವಿನ್ ಸಿ.ಗೌಡ ಮಾತನಾಡಿ, ತಾಂತ್ರಿಕ ಯೋಜನಾ ವಸ್ತು ಪ್ರದರ್ಶನ ಕಾರ್ಯ ಕ್ರಮಗಳು ವಿದ್ಯಾರ್ಥಿಗಳಿಗೆ ಪ್ರೋತ್ಸಾಹದಾಯಕ ವಾತಾವರಣ ಸೃಷ್ಟಿಸುತ್ತವೆ ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ.ಡಿ.ವಿ.ಚಂದ್ರಶೇಖರ್ ಅವರು ಪ್ರತಿ ಯೋಜನೆಯನ್ನು ವೀಕ್ಷಿಸಿ ವಿದ್ಯಾರ್ಥಿಗಳ ಈ ನೂತನ ಪ್ರಯತ್ನಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಬಳಿಕ ಅವರು, ಸೃಜನಾತ್ಮಕ ಹಾಗೂ ನವೀನ ಪರಿಕಲ್ಪನೆಗಳನ್ನು ಸಂಶೋಧನಾ ಮತ್ತು ತಾಂತ್ರಿಕ ಕ್ಷೇತ್ರಕ್ಕೆ ಹೆಚ್ಚು ಕೊಡುಗೆ ನೀಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಂತ್ರಿಕ ಯೋಜನಾ ವಸ್ತು ಪ್ರದರ್ಶನದ ಪ್ರಮುಖ ಸಂಚಾಲಕ ಡಾ.ಕುಮಾರ್ ಕೆಂಚೇಗೌಡ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.







