ಆಕ್ಸ್‌ಫರ್ಡ್ ಗೌರವ ಪದವಿ ವಾಪಸ್ ಮಾಡಿದ ಬ್ರೂನೈ ಸುಲ್ತಾನ

ಬಾಂಡರ್ ಸಿರೀ ಬಿಗೌವನ್ (ಬ್ರೂನೈ), ಮೇ 24: ಇಂಗ್ಲೆಂಡ್‌ನ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯ ನೀಡಿರುವ ಗೌರವ ಪದವಿಯನ್ನು ಬ್ರೂನೈ ಸುಲ್ತಾನ ಹಿಂದಿರುಗಿಸಿದ್ದಾರೆ. ಸಲಿಂಗಕಾಮಿಗಳು ಮತ್ತು ವ್ಯಭಿಚಾರಿಗಳಿಗೆ ಗಲ್ಲು ಶಿಕ್ಷೆ ನೀಡುವ ಹಾಗೂ ಕಳ್ಳರ ಕೈಕಾಲುಗಳನ್ನು ಕಡಿಯುವ ಬ್ರೂನೈಯ ನೂತನ ಕಠಿಣ ಕಾನೂನುಗಳಿಗೆ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯವು ಆತಂಕ ವ್ಯಕ್ತಪಡಿಸಿದ ಬಳಿಕ, ಅವರು ಈ ಕ್ರಮ ತೆಗೆದುಕೊಂಡಿದ್ದಾರೆ.
ನೂತನ ಎಲ್‌ಜಿಬಿಟಿ ಕಾನೂನಿನ ಬಗ್ಗೆ ವ್ಯಕ್ತವಾಗಿರುವ ಕಳವಳಗಳ ಹಿನ್ನೆಲೆಯಲ್ಲಿ ತನ್ನ ನಿರ್ಧಾರವನ್ನು ಮರುಪರಿಶೀಲನೆಗೊಳಪಡಿಸುವುದಾಗಿ ವಿಶ್ವವಿದ್ಯಾನಿಲಯವು ಗುರುವಾರ ಹೇಳಿದೆ ಎಂಬುದಾಗಿ ಬಿಬಿಸಿ ವರದಿ ಮಾಡಿದೆ.
ವಿಶ್ವವಿದ್ಯಾನಿಲಯವು ಕಳೆದ ತಿಂಗಳು ಸುಲ್ತಾನ ಹಸನಲ್ ಬೋಲ್ಕಿಯರಿಗೆ ಪತ್ರ ಬರೆದ ಬಳಿಕ, ಅವರು ಪದವಿಯನ್ನು ಹಿಂದಿರುಗಿಸುತ್ತಿರುವ ಬಗ್ಗೆ ನಮಗೆ ಮಾಹಿತಿ ಲಭಿಸಿದೆ ಎಂದು ಹೇಳಿಕೆಯೊಂದರಲ್ಲಿ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ವಕ್ತಾರೆಯೊಬ್ಬರು ಹೇಳಿದರು.
ಬ್ರೂನೈ ಸುಲ್ತಾನರಿಗೆ ವಿಶ್ವವಿದ್ಯಾನಿಲಯವು 1993ರಲ್ಲಿ ಗೌರವ ಕಾನೂನು ಪದವಿ ನೀಡಿತ್ತು.





