ರಾಹುಲ್ ಗಾಂಧಿ ರಾಜೀನಾಮೆಗೆ ಮುಂದಾಗಿಲ್ಲ: ಕಾಂಗ್ರೆಸ್ ಸ್ಪಷ್ಟನೆ

ಹೊಸದಿಲ್ಲಿ, ಮೇ 25: ಕಾಂಗ್ರೆಸ್‌ನ ಕಾರ್ಯಕಾರಿಣಿ ಸಭೆಯಲ್ಲಿ ರಾಹುಲ್ ಗಾಂಧಿ ರಾಜೀನಾಮೆ ಪ್ರಸ್ತಾವ ಮುಂದಿಟ್ಟಿದ್ದರು ಎಂಬ ಮಾಧ್ಯಮಗಳ ವರದಿಯನ್ನು ಕಾಂಗ್ರೆಸ್ ಸ್ಪಷ್ಟವಾಗಿ ತಳ್ಳಿ ಹಾಕಿದೆ.
ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಕಳಪೆ ನಿರ್ವಹಣೆಯ ಬಗ್ಗೆ ಸಮಾಲೋಚಿಸಲು ಶನಿವಾರ ಕಾಂಗ್ರೆಸ್‌ನ ಕಾರ್ಯಕಾರಿಣಿ ಸಮಿತಿ ಸಭೆ(ಸಿಡಬ್ಲುಸಿ) ನಡೆದಿದ್ದು, ಸಭೆಯಲ್ಲಿ ರಾಹುಲ್ ಗಾಂಧಿ, ಅವರ ತಾಯಿ ಸೋನಿಯಾ ಗಾಂಧಿ, ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಹಾಗೂ ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್, ಕಾಂಗ್ರೆಸ್ ಆಡಳಿತವಿರುವ ನಾಲ್ಕು ರಾಜ್ಯಗಳ ಮುಖ್ಯಮಂತ್ರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಪ್ರಧಾನಿ ಮೋದಿ ವಿರುದ್ಧ ಚೌಕೀದಾರ್ ಚೋರ್ ಹೈ ಎಂದು ರಾಷ್ಟ್ರದಾದ್ಯಂತ ರಾಹುಲ್ ಗಾಂಧಿ ನಡೆಸಿರುವ ಅಭಿಯಾನ ಜನರ ಮನಸ್ಸನ್ನು ಸೆಳೆಯಲು ವಿಫಲವಾಗಿದ್ದಲ್ಲದೆ ಮತ ಗಳಿಸುವಲ್ಲಿಯೂ ಎಡವಿತ್ತು. ಕಾಂಗ್ರೆಸ್ 17 ರಾಜ್ಯಗಳಲ್ಲಿ ವಾಶ್‌ಔಟ್ ಆಗಿದ್ದು ಡಿಸೆಂಬರ್‌ನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಹಿಂದಿ ಪ್ರಾಬಲ್ಯದ ಮೂರು ರಾಜ್ಯಗಳಾದ ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್‌ಗಢದಲ್ಲೂ ಕಳಪೆ ಪ್ರದರ್ಶನ ನೀಡಿತ್ತು. ಒಟ್ಟು 52 ಸೀಟುಗಳನ್ನು ಪಡೆದು ಅಧಿಕೃತ ವಿಪಕ್ಷ ಸ್ಥಾನ ಪಡೆಯಲೂ ವಿಫಲವಾಗಿದೆ.







