ಸಿಇಟಿ ಫಲಿತಾಂಶ ಪ್ರಕಟ: ಬೆಂಗಳೂರಿನ ವಿದ್ಯಾರ್ಥಿಗಳಿಗೇ ಅಧಿಕ ರ‍್ಯಾಂಕ್
ಬೆಂಗಳೂರು, ಮೇ 25: ಸ್ನಾತಕೋತ್ತರ ಕೋರ್ಸ್‌ಗಳಿಗೆ ಪ್ರವೇಶಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ 2019-20 ನೆ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ಫಲಿತಾಂಶ ಪ್ರಕಟಗೊಂಡಿದ್ದು, ಬೆಂಗಳೂರಿನ ವಿದ್ಯಾರ್ಥಿಗಳೇ ಅಧಿಕ ಸಂಖ್ಯೆಯಲ್ಲಿ ರ‍್ಯಾಂಕ್ ಪಡೆದುಕೊಂಡಿದ್ದಾರೆ.
ಇಂಜಿನಿಯರಿಂಗ್‌ನಲ್ಲಿ ಮಾರತ್ತಹಳ್ಳಿಯ ಚೈತನ್ಯ ಟೆಕ್ನೋ ಪಿಯು ಕಾಲೇಜಿನ ವಿದ್ಯಾರ್ಥಿ ಜಫಿನ್ ಬಿಜು, ನ್ಯಾಚುರೋಪತಿ ಮತ್ತು ಯೋಗ ವಿಜ್ಞಾನ ಹಾಗೂ ಪಶು ವೈದ್ಯಕೀಯ ವಿಭಾಗದಲ್ಲಿ ಪಿ. ಮಹೇಶ್ ಆನಂದ್, ಬಿ ಫಾರ್ಮಾ ಮತ್ತು ಫಾರ್ಮಾ ಡಿ ವಿಭಾಗದಲ್ಲಿ ಸಾಯಿ ಸಾಕೇತಿಕ ಚಕುರಿ, ಬಿಎಸ್‌ಸಿ ಕೃಷಿ ವಿಭಾಗದಲ್ಲಿ ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನ ಕೀರ್ತನ ಎಂ. ಅರುಣ್ ಪ್ರಥಮ ರ‍್ಯಾಂಕ್ ಪಡೆದಿದ್ದಾರೆ.
ಎಂಜಿನಿಯರಿಂಗ್ ವಿಭಾಗದಲ್ಲಿ ಬೆಂಗಳೂರು 7, ಮಂಗಳೂರು 2, ಬಳ್ಳಾರಿ 1, ನ್ಯಾಚುರೋಪತಿ ಮತ್ತು ಯೋಗ ವಿಜ್ಞಾನದಲ್ಲಿ 6 ಬೆಂಗಳೂರು, 2 ಮಂಗಳೂರು, ಮೈಸೂರು ಮತ್ತು ದಾವಣಗೆರೆ ತಲಾ 1 ಸ್ಥಾನ, ಬಿಎಸ್‌ಸಿ ಕೃಷಿ ವಿಭಾಗದಲ್ಲಿ 3 ಬೆಂಗಳೂರು, 4 ಮಂಗಳೂರು, ಮೈಸೂರು, ಹಾಸನ, ಶಿವಮೊಗ್ಗ ಹಾಗೂ ದಾವಣಗೆರೆ ತಲಾ ಒಂದು ರ‍್ಯಾಂಕ್, ಪಶುವೈದ್ಯಕೀಯ ವಿಭಾಗದಲ್ಲಿ 8 ಬೆಂಗಳೂರು, ದಾವಣಗೆರೆ ಮತ್ತು ಮೈಸೂರಿಗೆ ತಲಾ 1 ರ‍್ಯಾಂಕ್, ಬಿ ಫಾರ್ಮಾ ಮತ್ತು ಫಾರ್ಮಾ ಡಿ ವಿಭಾಗದಲ್ಲಿ 7 ಬೆಂಗಳೂರು, ಮಂಗಳೂರು ಮೈಸೂರು, ಬಳ್ಳಾರಿ ಜಿಲ್ಲೆಗಳ ವಿದ್ಯಾರ್ಥಿಗಳು ತಲಾ 1 ರ‍್ಯಾಂಕ್ ಪಡೆದುಕೊಂಡಿದ್ದಾರೆ.
1,80,315 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರು: ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಸಿಇಟಿ ಪರೀಕ್ಷೆ ಬರೆಯಲು 1,94,308 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದರು. ಅದರಲ್ಲಿ 1,80,315 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಎಂಜಿನಿಯರಿಂಗ್ ವಿಭಾಗದಲ್ಲಿ 1,40,957, ನ್ಯಾಚುರೋಪತಿ ಮತ್ತು ಯೋಗ ವಿಜ್ಞಾನ 1,17,947, ಬಿಎಸ್‌ಸಿ ಕೃಷಿ 1,13,294, ಪಶು ವೈದ್ಯಕೀಯ 1,18,045 ಹಾಗೂ ಬಿ ಫಾರ್ಮಾ 1,46,546, ಫಾರ್ಮಾ ಡಿ ವಿಭಾಗದಲ್ಲಿ 1,46,759 ವಿದ್ಯಾರ್ಥಿಗಳು ರ‍್ಯಾಂಕ್ ಪಡೆದಿದ್ದಾರೆ.
ಆನ್‌ಲೈನ್ ಮೂಲಕ ಪರೀಕ್ಷೆ: ಹೊರ ರಾಜ್ಯದ ಹಾಗೂ ವಿವಿಧ ಜಿಲ್ಲೆಗಳಲ್ಲಿನ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂಬ ಕಾರಣದಿಂದ ಮುಂದಿನ ಶೈಕ್ಷಣಿಕ ಸಾಲಿನಿಂದ ಸಿಇಟಿಯನ್ನು ಆನ್‌ಲೈನ್ ಮೂಲಕ ನಡೆಸಲಾಗುತ್ತದೆ. ಈ ಸಂಬಂಧ ಹಲವು ಸುತ್ತಿನ ಅಣಕು ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಅದರಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳಬಹುದು.
ಗ್ರಾಮೀಣಾ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಪಿಯುಸಿ ಮತ್ತು ಡಿಗ್ರಿ ಕಾಲೇಜುಗಳಲ್ಲಿ ಪರೀಕ್ಷಾ ಕೇಂದ್ರಗಳನ್ನು ತೆಗೆಯಲಾಗುವುದು. ಆನ್‌ಲೈನ್ ಪರೀಕ್ಷೆಯ ಪೂರ್ವ ಸಿದ್ಧತೆಗಾಗಿ ಈಗಾಗಲೇ ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರದ ಜೊತೆ ಚರ್ಚೆ ನಡೆಸಲಾಗುತ್ತಿದೆ ಎಂದು ಜಿ.ಟಿ.ದೇವೇಗೌಡ ಇದೇ ಸಂದರ್ಭದಲ್ಲಿ ಮಾಹಿತಿ ನೀಡಿದರು.
ಫಸ್ಟ್ 5 ರ‍್ಯಾಂಕ್ ಪಡೆದವರಿಗೆ ಉಚಿತ ಶಿಕ್ಷಣ
ಇಂಜಿನಿಯರಿಂಗ್, ಪಶು ವೈದ್ಯಕೀಯ, ಬಿ-ಫಾರ್ಮಾ, ಡಿ- ಫಾರ್ಮಾ, ನ್ಯಾಚುರೋಪತಿ ಮತ್ತು ಯೋಗ ವಿಜ್ಞಾನ, ಬಿಎಸ್‌ಸಿ ಕೃಷಿ ವಿಭಾಗದಲ್ಲಿ ಮೊದಲ 5 ರ‍್ಯಾಂಕ್ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಿರ್ಧರಿಸಿದೆ. ಜೂನ್ 6ರಿಂದ ದಾಖಲಾತಿಗಳ ಪರಿಶೀಲನೆ ಆರಂಭವಾಗಲಿದೆ.
ನೀಟ್ ಫಲಿತಾಂಶ ಆಧರಿಸಿ ಸೀಟು ಹಂಚಿಕೆ
ನೀಟ್ ಅಂಕ ಆಧರಿಸಿಯೇ ಅರ್ಕಿಟೆಕ್ಚರ್ ಕೋರ್ಸ್‌ಗಳ ರ‍್ಯಾಂಕ್ ಪ್ರಕಟಿಸಲಾಗುವುದು. ಹಾಗೇ ವೈದ್ಯಕೀಯ ಮತ್ತು ದಂತ ವೈದ್ಯಕೀಯ, ಭಾರತೀಯ ವೈದ್ಯಕೀಯ ಪದ್ಧತಿ ಹಾಗೂ ಹೋಮಿಯೋಪತಿ ಕೋರ್ಸ್‌ಗಳ ಪ್ರವೇಶಾತಿಗೂ ನೀಟ್ ಪರಿಗಣಿಸಲಾಗುವುದು. ಬೆಂಗಳೂರು ಗ್ರಾಮಾಂತರ ಹೊರತು ಪಡಿಸಿ ರಾಜ್ಯದ 28 ಜಿಲ್ಲೆಯ ಪರೀಕ್ಷಾ ಪ್ರಾಧಿಕಾರದ ಕೇಂದ್ರಗಳಲ್ಲಿ ದಾಖಲಾತಿ ಪರಿಶೀಲನೆ ನಡೆಯಲಿದೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಹೇಳಿದರು.
ವಿದ್ಯಾರ್ಥಿಗಳ ಅಭಿಪ್ರಾಯಗಳು....
ಪಿಯುಸಿಯಲ್ಲಿ ಉತ್ತಮ ಫಲಿತಾಂಶ ಬಂದ ಬಳಿಕ ಸ್ನಾತಕೋತ್ತರ ಕೋರ್ಸ್‌ಗಳಿಗೆ ಸೇರಲು ಸಿಇಟಿಯಲ್ಲಿ ರ‍್ಯಾಂಕ್ ಪಡೆಯಬೇಕು ಎಂದು ಶಿಕ್ಷಕರು ಮಾರ್ಗದರ್ಶನ ಮಾಡಿದರು. ಅದರಂತೆ, ನಾನು ಅಭ್ಯಾಸ ಮಾಡಿದ್ದೆ. ಇಂದು ನಿರೀಕ್ಷಿಸಿದಂತೆ ಫಾರ್ಮಸಿಯಲ್ಲಿ ಮೊದಲ ರ‍್ಯಾಂಕ್ ಬಂದಿದೆ. ಎಂಜಿನಿಯರಿಂಗ್‌ನಲ್ಲಿ 3ನೇ ರ‍್ಯಾಂಕ್ ಬಂದಿದೆ. ಐಐಟಿ ಮುಂಬೈನಲ್ಲಿ ಇಂಜಿನಿಯರಿಂಗ್ ಎಲೆಕ್ಟ್ರಾನಿಕಲ್ ಮಾಡುತ್ತೇನೆ.
- ಸಾಯ ಸಾಕೇತಿಕ, ಚೈತನ್ಯ ಟೆಕ್ನೋ ಪಿಯು ಕಾಲೇಜು (ಫಾರ್ಮಸಿ ಪ್ರಥಮ ರ‍್ಯಾಂಕ್)
ಕೃಷಿ ವಿಭಾಗದಲ್ಲಿ ಮೊದಲ ರ‍್ಯಾಂಕ್ ಪಡೆದುಕೊಂಡಿರುವುದಕ್ಕೆ ಹೆಮ್ಮೆ ಎನಿಸುತ್ತಿದೆ. ಐಐಟಿಯಲ್ಲಿ ಎಂಜಿನಿಯರಿಂಗ್ ಮಾಡುವ ಆಸೆ ಇದೆ. ನೀಟ್ ಲಿತಾಂಶ ಬಂದ ಮೇಲೆ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ.
-ಕೀರ್ತನಾ, ರಾಜಾಜಿನಗರದ ನ್ಯಾಷನಲ್ ಪಬ್ಲಿಕ್ ಸ್ಕೂಲ್ (ಬಿಎಸ್‌ಸಿ ಕೃಷಿಯಲ್ಲಿ ಪ್ರಥಮ ರ‍್ಯಾಂಕ್)
ನಮ್ಮ ಶಿಕ್ಷಕರು ಉತ್ತಮ ರೀತಿಯಲ್ಲಿ ಮಾರ್ಗದರ್ಶನ ಮಾಡಿದ್ದರು. ನನಗೆ ಸಿಇಟಿಯಲ್ಲಿ ರ‍್ಯಾಂಕ್ ಬರುತ್ತದೆ ಎಂಬ ವಿಶ್ವಾಸವಿತ್ತು. ಮುಂದೆ ಎಂಬಿಬಿಎಸ್ ಮಾಡುವ ಆಸೆಯಿದೆ.
- ಪಿ. ಮಹೇಶ್ ಆನಂದ, ಚೈತನ್ಯ ಟೆಕ್ನೋ ಕಾಲೇಜು (ಪಶು ವೈದ್ಯಕೀಯ, ನ್ಯಾಚುರೋಪತಿ ಮತ್ತು ಯೋಗ ವಿಜ್ಞಾನ ವಿಭಾಗದಲ್ಲಿ ಪ್ರಥಮ)
ಕಳೆದ ಒಂದು ತಿಂಗಳ ಹಿಂದೆ ಪ್ರಕಟಗೊಂಡ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 4 ನೆ ಸ್ಥಾನ ಪಡೆದಿದ್ದೆ. ಅದು ಸಾಕಷ್ಟು ನೋವುಂಟು ಮಾಡಿತ್ತು. ಆದುದರಿಂದಾಗಿ ಸಿಇಟಿಯಲ್ಲಿ ಹೆಚ್ಚು ಅಂಕ ಪಡೆಯಬೇಕು ಎಂದು ಕಷ್ಟಪಟ್ಟು ಓದಿದೆ. ನನ್ನ ನಿರೀಕ್ಷೆಯಂತೆ ಇಂದು ರ‍್ಯಾಂಕ್ ಬಂದಿದೆ. ಮುಂದೆ ಮೆಡಿಕಲ್ ಮಾಡುವ ಆಸೆಯಿದ್ದು, ನೀಟ್ ಫಲಿತಾಂಶದ ಬಳಿಕ ನಿರ್ಧಾರ ಮಾಡುವೆ.
- ಭುವನ್, ಎಕ್ಸ್‌ಪರ್ಟ್ ಪಿಯು ಕಾಲೇಜು (ಬಿಎಸ್‌ಸಿ ಕೃಷಿಯಲ್ಲಿ ದ್ವಿತೀಯ ರ‍್ಯಾಂಕ್)