ಸೋಲಿನ ನೈತಿಕ ಹೊಣೆ ನಾನೇ ಹೊರುತ್ತೇನೆ: ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್

ಬೆಂಗಳೂರು, ಮೇ 25: ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಸೋಲಿನ ಹೊಣೆಯನ್ನು ನಾನೇ ಹೊರುತ್ತೇನೆ. ನಾವು ಕೇವಲ ಒಂದು ಸ್ಥಾನವನ್ನಷ್ಟೇ ಗೆಲ್ಲುತ್ತೇವೆ ಅಂದುಕೊಂಡಿರಲಿಲ್ಲ. ಇಂತಹ ಫಲಿತಾಂಶವನ್ನು ಕನಸು ಮನಸ್ಸಿನಲ್ಲೂ ನಿರೀಕ್ಷಿಸಿರಲಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದರು.
ಶನಿವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನು ದ್ದೇಶಿಸಿ ಮಾತನಾಡಿದ ಅವರು, ಪಕ್ಷದ ಸೋಲಿನ ಹೊಣೆಗಾರಿಕೆಯನ್ನು ನೈತಿಕವಾಗಿ ಅಧ್ಯಕ್ಷನಾಗಿ ನಾನು ಹೊರಬೇಕು. ರಾಜಕೀಯ ಕ್ಷೇತ್ರದಲ್ಲಿ ಸೋಲು-ಗೆಲುವು ಇದ್ದೇ ಇರುತ್ತದೆ. ಸೋಲನ್ನು ಕಂಡಾಗ ಧೈರ್ಯವಾಗಿ ಎದುರಿಸುತ್ತೇವೆ, ಧೃತಿಗೆಡುವುದಿಲ್ಲ ಎಂದರು.
ಚುನಾವಣೆಯ ಫಲಿತಾಂಶ ಪ್ರಕಟವಾದ ಬಳಿಕ ನಾವು ಅನೇಕ ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಈ ಚುನಾವಣೆಯ ಫಲಿತಾಂಶ, ನಮ್ಮ ಪ್ರಚಾರ ಸೇರಿದಂತೆ ಸೋಲಿಗೆ ಬೇರೆ ಬೇರೆ ಕಾರಣಗಳಿವೆ. ಎಲ್ಲ ಮಾಹಿತಿಯನ್ನು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ತಲುಪಿಸುತ್ತೇನೆ. ಆನಂತರ ಅವರು ಕೈಗೊಳ್ಳುವ ತೀರ್ಮಾನದಂತೆ ಮುಂದುವರೆಯುತ್ತೇವೆ ಎಂದು ಅವರು ಹೇಳಿದರು.
ಕೇವಲ ಆರು ತಿಂಗಳ ಹಿಂದೆಯಷ್ಟೇ ನಡೆದ ಮಂಡ್ಯ, ಬಳ್ಳಾರಿ ಲೋಕಸಭಾ ಕ್ಷೇತ್ರ, ರಾಮನಗರ, ಜಮಖಂಡಿ ವಿಧಾನಸಭಾ ಕ್ಷೇತ್ರಗಳಲ್ಲಿ ನಾವು ಗೆಲುವು ಸಾಧಿಸಿದ್ದೆವು. ಆದರೆ, ಈ ಚುನಾವಣೆಯಲ್ಲಿ ಮತದಾರರ ತೀರ್ಪು ಭಿನ್ನವಾಗಿತ್ತು. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿಗಳಿಗೆ ಶೇ.49ಕ್ಕಿಂತ ಹೆಚ್ಚಿನ ಮತಗಳು ಬಂದಿವೆ. ಇದಕ್ಕಾಗಿ ನಮಗೆ ಮತ ಹಾಕಿರುವ ಮತದಾರರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.
ಕಳೆದ ಐದು ವರ್ಷಗಳಲ್ಲಿ ಮೋದಿ ಯಾವುದೇ ಸಾಧನೆ ಮಾಡಿಲ್ಲ, ಜನರಿಗೆ ಕೊಟ್ಟ ಆಶ್ವಾಸನೆಗಳನ್ನು ಈಡೇರಿಸಿಲ್ಲ. ಆರ್ಥಿಕ ಪರಿಸ್ಥಿತಿ, ನಿರುದ್ಯೋಗ ಸಮಸ್ಯೆ, ರೈತರ ಸಮಸ್ಯೆಗಳು ಸೇರಿದಂತೆ ಅನೇಕ ಸಮಸ್ಯೆಗಳು ಬಗೆಹರಿದಿಲ್ಲ. ಆದರೂ, ಮೋದಿಗೆ ಮತ್ತೊಂದು ಅವಕಾಶ ನೀಡಲು ಜನ ನಿರ್ಧರಿಸಿದ್ದಾರೆ ಎಂದು ಅವರು ತಿಳಿಸಿದರು.
ಲೋಕಸಭಾ ಚುನಾವಣೆಯ ಫಲಿತಾಂಶವು ಮೈತ್ರಿ ಸರಕಾರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ನಿನ್ನೆಯಷ್ಟೇ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಭೇಟಿ ಮಾಡಿ, ಸರಕಾರವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ನಡೆಸುವ ಸಂಬಂಧ ಚರ್ಚೆ ಮಾಡಿದ್ದಾರೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.
ಮೇ 29ರಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯನ್ನು ಕರೆಯಲಾಗಿದ್ದು, ಇದರಲ್ಲಿ ಕೆಪಿಸಿಸಿ ಕಾರ್ಯಕಾರಿ ಸಮಿತಿ ಸದಸ್ಯರು ಪಾಲ್ಗೊಳ್ಳಲಿದ್ದಾರೆ. ಮೈತ್ರಿ ಸರಕಾರ ಯಾವ ರೀತಿಯಲ್ಲಿ ಕೆಲಸ ಮಾಡಬೇಕು, ಯಾವ ರೀತಿಯ ಕಾರ್ಯಕ್ರಮಗಳನ್ನು ರೂಪಿಸಿ ಜನರಿಗೆ ತಲುಪಿಸಬೇಕು, ಪಕ್ಷದ ಬಲವರ್ಧನೆಗಾಗಿ ಬ್ಲಾಕ್ ಹಾಗೂ ಜಿಲ್ಲಾ ಮಟ್ಟದಲ್ಲಿ ಯಾವ ರೀತಿ ಕೆಲಸ ಮಾಡಬೇಕು ಎಂಬುದರ ಕುರಿತು ಚರ್ಚಿಸುತ್ತೇವೆ ಎಂದು ಅವರು ತಿಳಿಸಿದರು.
ಕೆಲವು ವಿಚಾರಗಳನ್ನು ಬಹಿರಂಗವಾಗಿ ಮಾತನಾಡಲು ಆಗುವುದಿಲ್ಲ. ನನಗೆ ಅಧಿಕಾರ ಮುಖ್ಯವಲ್ಲ, ಸಚಿವನಾಗಿದ್ದಾಗಲೂ ಪಕ್ಷದ ಸಂಘಟನೆಗಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆ. ಕಾಂಗ್ರೆಸ್ ಪಕ್ಷಕ್ಕೆ ಇಡೀ ದೇಶದಲ್ಲಿ ದೊಡ್ಡ ಸವಾಲಿದೆ. ಅದನ್ನು ಎದುರಿಸಲು ನಾವು ಇನ್ನು ಶಿಸ್ತು, ಒಗ್ಗಟ್ಟಿನಿಂದ ಕೆಲಸ ಮಾಡಬೇಕಿದೆ ಎಂದು ಅವರು ಹೇಳಿದರು.
ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿದರೂ, ನಮ್ಮ ನಿರೀಕ್ಷೆಗೆ ತಕ್ಕ ಫಲಿತಾಂಶ ಬಂದಿಲ್ಲ. ಈ ಚುನಾವಣೆಯ ಫಲಿತಾಂಶ ನಮಗೆ ಎಚ್ಚರಿಕೆ. ನಮ್ಮಲ್ಲಿರುವ ಲೋಪಗಳನ್ನು ಸರಿಪಡಿಸಿಕೊಂಡು ಹೋಗಬೇಕು. ಸಿದ್ದರಾಮಯ್ಯ ಸರಕಾರದ ಬೆನ್ನೆಲುಬಾಗಿ ಇರುತ್ತಾರೆ. ಕುಮಾರಸ್ವಾಮಿ ಸರಕಾರವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮುಂದುವರೆಸುತ್ತಾರೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.
ಬಿಜೆಪಿಯ ಬಹುದೊಡ್ಡ ಗೆಲುವಿಗೆ ಬಿಜೆಪಿ ಹಾಗೂ ಪ್ರಧಾನಿ ಮೋದಿಗೆ ಅಭಿನಂದನೆ. ಜನರ ತಿರ್ಪನ್ನು ನಾವು ಗೌರವಿಸಬೇಕು. ಪ್ರಜಾಪ್ರಭುತ್ವ ರಕ್ಷಿಸುವ ನಮ್ಮ ಹೋರಾಟ ನಿರಂತರವಾಗಿರುತ್ತದೆ. ದೇಶದ ಜನರ ತೀರ್ಮಾನ ನಾವು ಒಪ್ಪಿಕೊಂಡಿದ್ದೇವೆ ಎಂದು ಅವರು ಹೇಳಿದರು.