ಸೂಕ್ಷ್ಮ ಪ್ರದೇಶಗಳ ಬಗ್ಗೆ ಹೆಚ್ಚಿನ ಗಮನ ಹರಿಸಿ: ಕೊಡಗು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಸೂಚನೆ

ಮಡಿಕೇರಿ, ಮೇ 25: ಸದ್ಯದಲ್ಲಿಯೇ ಮುಂಗಾರು ಆರಂಭವಾಗಲಿದ್ದು, ಈಗಾಗಲೇ ಗುರುತಿಸಲಾಗಿರುವ ಸೂಕ್ಷ್ಮ ಪ್ರದೇಶಗಳ ಬಗ್ಗೆ ಹೆಚ್ಚಿನ ಗಮನಹರಿಸುವಂತೆ ನೋಡಲ್ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅನ್ಬುಕುಮಾರ್ ಅವರು ಸೂಚಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬರ ಮತ್ತು ಮುಂಗಾರು ಸಂಬಂಧ ಶನಿವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರಕೃತಿ ವಿಕೋಪ ಎದುರಿಸುವ ನಿಟ್ಟಿನಲ್ಲಿ ಈಗಾಗಲೇ ಗುರುತಿಸಲಾಗಿರುವ ಸೂಕ್ಷ್ಮ ಪ್ರದೇಶಗಳಿಗೆ ನೋಡಲ್ ಅಧಿಕಾರಿಗಳು ಭೇಟಿ ನೀಡಿ ಅಲ್ಲಿನ ಸಮಸ್ಯೆಗಳು ಹಾಗೂ ಪರಿಹಾರ ಬಗ್ಗೆ ಮಾಹಿತಿ ಪಡೆಯಬೇಕು. ರಸ್ತೆ, ವಿದ್ಯುತ್ ಸಂಪರ್ಕ, ಕುಡಿಯುವ ನೀರು ಮತ್ತಿತರ ಇವೆಯೇ ಎಂಬುದನ್ನು ಗಮನಹರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿ. ಅನ್ಬುಕುಮಾರ್ ಅವರು ತಿಳಿಸಿದ್ದಾರೆ.
ಕಂಟ್ರೋಲ್ ರೂಮ್‍ಗೆ ಒಂದೇ ಟೆಲಿಪೋನ್ ನಂಬರ್ ಇದ್ದರೂ ಸಹ ನಾಲ್ಕೈದು ಟೆಲಿಪೋನ್ ಬಾಕ್ಸ್ ಇಟ್ಟಿರಬೇಕು. ಅಷ್ಟೇ ಸಿಬ್ಬಂದಿಗಳು ಮತ್ತು ಕಂಪ್ಯೂಟರ್ ಇರಬೇಕು. ದೂರವಾಣಿ ಕರೆಗಳು ಬಂದಾಗ ಸ್ವೀಕರಿಸಿ ಮಾಹಿತಿ ನೀಡಬೇಕು. ಮತ್ತು ಯಾವ ಊರಿನಿಂದ, ಯಾರು ಕರೆ ಮಾಡಿದ್ದಾರೆ ಎಂಬ ಬಗ್ಗೆ ಮಾಹಿತಿ ಇರಬೇಕು ಎಂದು ಅವರು ಹೇಳಿದರು.
ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಲೋಕೋಪಯೋಗಿ, ಪಂಚಾಯತ್ ರಾಜ್ ಮತ್ತು ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ ಬಾಕಿ ಇರುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ವಿ.ಅನ್ಬುಕುಮಾರ್ ಸೂಚಿಸಿದರು. ಸದ್ಯದಲ್ಲೇ ಮುಂಗಾರು ಆರಂಭವಾಗಲಿದ್ದು, ಈ ಹಿನ್ನೆಲೆ ಜಿಲ್ಲಾಡಳಿತ ಪ್ರಕೃತಿ ವಿಕೋಪ ಎದುರಿಸುವ ನಿಟ್ಟಿನಲ್ಲಿ ಇದುವರೆಗೆ ಕೈಗೊಳ್ಳಲಾಗಿರುವ ಸಿದ್ಧತೆ ಬಗ್ಗೆ ಜನಪ್ರತಿನಿಧಿಗಳು, ಸರ್ಕಾರೇತರ ಸಂಸ್ಥೆಗಳು ಹಾಗೂ ಇತರರಿಗೆ ಮಾಹಿತಿ ನೀಡುವ ನಿಟ್ಟಿನಲ್ಲಿ ಸಭೆ ಆಹ್ವಾನಿಸುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅನ್ಬುಕುಮಾರ್ ಸಲಹೆ ಮಾಡಿದರು.
ಕಳೆದ ಬಾರಿ ಸಂಭವಿಸಿದ ಪ್ರಕೃತಿ ವಿಕೋಪದಿಂದಾಗಿ ಸಾಕಷ್ಟು ನಷ್ಟ ಉಂಟಾಯಿತು. ಆದ್ದರಿಂದ ಈ ಬಾರಿ ಮುಂಗಾರು ಅವಧಿಯಲ್ಲಿ ಪ್ರಕೃತಿ ವಿಕೋಪ ಸಂಭವಿಸಿದ್ದಲ್ಲಿ ಉಂಟಾಗಬಹುದಾದ ಅನಾಹುತ ತಡೆಯುವ ನಿಟ್ಟಿನಲ್ಲಿ ಜಿಲ್ಲಾಡಳಿತ ಇದುವರೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಬೇಕು. ಜೊತೆಗೆ ಜನಪ್ರತಿನಿಧಿಗಳು, ಸರ್ಕಾರೇತರ ಸಂಸ್ಥೆಗಳು ಹಾಗೂ ಇತರರಿಂದ ಸಲಹೆ, ಮಾಹಿತಿ ಪಡೆಯುವಂತಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅವರು ಸಲಹೆ ಮಾಡಿದರು.
ಪರಿಹಾರ ಕೇಂದ್ರ ಗುರ್ತಿಸಿಕೊಳ್ಳುವುದು, ಆಸ್ಪತ್ರೆಗಳಲ್ಲಿ ಆಂಬ್ಯುಲೆನ್ಸ್ ಸೇವೆ, ಔಷಧಿ, ಇತರೆ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ಆಹಾರ ಪೂರೈಕೆಯಿಂದ ಅಡುಗೆ ಅನಿಲ, ಆಹಾರ ದಾಸ್ತಾನು ಮಾಡಿಕೊಳ್ಳಬೇಕು. ಪೊಲೀಸ್, ವೈದ್ಯಕೀಯ, ಗೃಹ ರಕ್ಷಕ ದಳ ಸೇವೆಗಳ ಅಗತ್ಯ ಸನ್ನದು ಮಾಡಿಕೊಂಡಿರಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅವರು ತಿಳಿಸಿದರು.
ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಸದ್ಯದಲ್ಲೇ ಜನಪ್ರತಿನಿಧಿಗಳು, ಸರ್ಕಾರೇತರ ಸಂಸ್ಥೆಗಳು, ಹಾಗೂ ಇತರರ ಸಭೆ ಆಹ್ವಾನಿಸಲಾಗುವುದು ಎಂದು ಹೇಳಿದರು. ಈಗಾಗಲೇ ಸೂಕ್ಷ್ಮ ಪ್ರದೇಶಗಳು ಸೇರಿದಂತೆ ಹಲವು ಕಡೆಗಳಿಗೆ ಭೇಟಿ ನೀಡಲಾಗುತ್ತಿದೆ. ಅಲ್ಲಿನ ಪರಿಸ್ಥಿತಿ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ. ಮುಂಜಾಗ್ರತ ಕ್ರಮವಾಗಿ ಜಿಲ್ಲೆಗೆ ಎನ್‍ಡಿಆರ್‍ಎಫ್ ತಂಡ ಆಗಮಿಸಲಿದ್ದು, ಸೂಕ್ಷ್ಮ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.
ಹಾಗೆಯೇ ಮೇ, 28 ಮತ್ತು 29 ರಂದು ಭಾರತೀಯ ಸೇನೆ, ಪೊಲೀಸ್, ಅಗ್ನಿಶಾಮಕ ಇಲಾಖೆ ಇತರೆ ತಂಡದವರು ಭೂಕುಸಿತ ಪ್ರದೇಶವೆಂದು ಗುರುತಿಸಲಾಗಿರುವ ಹೆಬ್ಬೆಟಗೇರಿ ಹಾಗೂ ಪ್ರವಾಹ ಪೀಡಿತ ಪ್ರದೇಶವೆಂದು ಗುರುತಿಸಲಾಗಿರುವ ಹಟ್ಟಿಹೊಳೆಯಲ್ಲಿ ‘ಅಣಕು ಪ್ರದರ್ಶನ’ ನಡೆಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಅವರು ಹೇಳಿದರು.
ಪ್ರಕೃತಿ ವಿಕೋಪ ಎದುರಿಸುವ ನಿಟ್ಟಿನಲ್ಲಿ ಈಗಾಗಲೇ ಸೂಕ್ಷ್ಮ ಪ್ರದೇಶಗಳಿಗೆ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ನೋಡಲ್ ಅಧಿಕಾರಿಗಳು ಅಲ್ಲಿನ ಸ್ಥಳೀಯ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಅವರು ತಿಳಿಸಿದರು.
ನೋಡಲ್ ಅಧಿಕಾರಿಗಳಾದ ಚಂದ್ರಶೇಖರ್ ಅವರು ಸೂಕ್ಷ್ಮ ಪ್ರದೇಶಗಳಲ್ಲಿನ ಕುಟುಂಬದವರಿಗೆ ಮೂರು ತಿಂಗಳ ಮಟ್ಟಿಗಾದರೂ ಸೀಮೆಎಣ್ಣೆ ವಿತರಿಸಬೇಕು. ಗರ್ವಾಲೆಯ ಉಪ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಹಾಗೂ ಶ್ರುಶ್ರೂಷಕರನ್ನು ನಿಯೋಜಿಸುವುದು, ಮಳೆಗಾಲದಲ್ಲಿ ರಸ್ತೆ ಬಂದ್ ಆಗುವುದನ್ನು ತಪ್ಪಿಸಲು ಅಗತ್ಯ ಕ್ರಮ ಕೈಗೊಳ್ಳುವುದು ಮತ್ತಿತರ ಬೇಡಿಕೆಗಳು ಇವೆ ಎಂದು ಅವರು ಮಾಹಿತಿ ನೀಡಿದರು.
ಮತ್ತೊಬ್ಬ ನೋಡಲ್ ಅಧಿಕಾರಿ ಅವಿನ್ ಅವರು ಮಕ್ಕಂದೂರು ಗ್ರಾ.ಪಂ. ವ್ಯಾಪ್ತಿಯ ಹೆಮ್ಮೆತ್ತಾಳು, ಮೇಘತ್ತಾಲು, ತಂತಿಪಾಲ ಮತ್ತಿತರ ಕಡೆಗಳ ಕುಟುಂಬದವರಿಗೆ ಹೆಚ್ಚಿನ ಆಹಾರ ಬೇಡಿಕೆ ಇದೆ ಎಂದು ಅವರು ತಿಳಿಸಿದರು.
ಹಾಗೆಯೇ ತಂತಿಪಾಲ ಸೇತುವೆಯಲ್ಲಿ ಹೂಳು ತುಂಬಿದೆ. ಹಾಗೆಯೇ ಮರಗಳನ್ನು ತೆರವುಗೊಳಿಸಬೇಕು ಎಂದು ಸಭೆಯ ಗಮನಕ್ಕೆ ತಂದರು.
ನೋಡಲ್ ಅಧಿಕಾರಿ ಗಾಯತ್ರಿ ಅವರು ಮರಗೋಡು ಹಾಗೂ ಮೇಕೇರಿ ಗ್ರಾ.ಪಂ.ವ್ಯಾಪ್ತಿಯಲ್ಲಿ ಮನೆ ಬಳಿ ತಡೆಗೋಡೆ ನಿರ್ಮಾಣಕ್ಕೆ ಬೇಡಿಕೆ ಹೆಚ್ಚಿನದ್ದಾಗಿದೆ ಎಂದು ಅವರು ತಿಳಿಸಿದರು. ಸೂಕ್ಷ್ಮ ಪ್ರದೇಶಗಳ ವ್ಯಾಪ್ತಿಯಲ್ಲಿ ಗರ್ಭಿಣಿಯರು, ಬಾಣಂತಿಯರ ಪಟ್ಟಿ ಮಾಡಿ ಕಾಲ ಕಾಲಕ್ಕೆ ಆರೋಗ್ಯ ಸೇವೆ ಕಲ್ಪಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವೈದ್ಯಾಧಿಕಾರಿಗಳಿಗೆ ಸೂಚಿಸಲಾಯಿತು.
ಜಿ.ಪಂ.ಸಿಇಒ ಕೆ.ಲಕ್ಷ್ಮಿಪ್ರಿಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪೆನ್ನೇಕರ್, ಜಿ.ಪಂ.ಉಪ ಕಾರ್ಯದರ್ಶಿ ಗುಡೂರು ಭೀಮಸೇನ, ಉಪ ವಿಭಾಗಾಧಿಕಾರಿ ಟಿ.ಜವರೇಗೌಡ, ಭೂ ದಾಖಲೆಗಳ ಸಹಾಯಕ ನಿರ್ದೇಶಕರಾದ ಷಂಶುದ್ದೀನ್, ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಇಬ್ರಾಹಿಂ, ಜಿ.ಪಂ. ಕುಡಿಯುವ ನೀರು ವಿಭಾಗದ ಎಂಜಿನಿಯರ್ ರೇವಣ್ಣವರ್, ರಾಷ್ಟ್ರೀಯ ಹೆದ್ದಾರಿ ವಿಭಾಗದ ಎಂಜಿನಿಯರ್ ಹೊಳ್ಳ, ನೋಡಲ್ ಅಧಿಕಾರಿಗಳು ಇತರರು ಹಾಜರಿದ್ದರು.







