ಪ್ಯಾಕೇಜ್ ಬಾಂಬ್ ಸ್ಫೋಟ: 13 ಮಂದಿಗೆ ಗಾಯ

ಲಿಯೊನ್,ಮೇ 24: ಫ್ರಾನ್ಸ್‌ನ ಲಿಯೊನ್ ನಗರದ ರಸ್ತೆಯೊಂದರಲ್ಲಿ ಶುಕ್ರವಾರ ಸಂಜೆ ನಡೆದ ಸ್ಫೋಟದಲ್ಲಿ ಕನಿಷ್ಠ 13 ಮಂದಿ ಗಾಯಗೊಂಡಿದ್ದಾರೆ.
ನಗರದ ಎರಡು ಪ್ರಮುಖ ರಸ್ತೆಗಳು ಸಂಧಿಸುವ ಸ್ಥಳದಲ್ಲಿರುವ ಬೇಕರಿಯೊಂದರ ಮುಂದುಗಡೆ ಇರಿಸಲಾಗಿದ್ದ ಪ್ಯಾಕೇಜ್ ಒಂದು ಸ್ಫೋಟಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಪ್ಯಾಕೇಜ್‌ನಲ್ಲಿ ಸ್ಫೋಟಕವು ಸ್ಕ್ರೂಗಳು ಅಥವಾ ಬೋಲ್ಟ್‌ಗಳನ್ನು ಒಳಗೊಂಡಿತ್ತು ಎಂದು ಅವರು ಹೇಳಿದ್ದಾರೆ.
ಸ್ಫೋಟ ಘಟನೆಗೆ ಸಂಬಂಧಿಸಿ ಪೊಲೀಸರು 30ರ ಹರೆಯದ ಸೈಕಲ್ ಸವಾರನೊಬ್ಬನ ಶೋಧದಲ್ಲಿ ತೊಡಗಿದ್ದಾರೆ. ಸ್ಫೋಟಕ್ಕೆ ಕೆಲವು ನಿಮಿಷಗಳ ಮೊದಲು ಆತ ಈ ಸ್ಥಳದಲ್ಲಿ ಅಡ್ಡಾಡುತ್ತಿದ್ದುದನ್ನು ಸಿಸಿ ಕ್ಯಾಮರಾಗಳು ಸೆರೆಹಿಡಿದಿವೆ.
ಯುರೋಪ್ ಸಂಸತ್‌ಗೆ ಕೇವಲ ಎರಡು ದಿನಗಳಿರುವಾಗಲೇ ಈ ವಿಧ್ವಂಸಕೃತ್ಯ ನಡೆದಿರುವುದು ಫ್ರಾನ್ಸ್‌ನಲ್ಲಿ ತೀವ್ರ ಕಳವಳಕ್ಕೆ ಕಾರಣವಾಗಿದೆ.
ಗಾಯಾಳುಗಳಲ್ಲಿ 11 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಯಾರಿಗೂ ಪ್ರಾಣಾಪಾಯಕಾರಿ ಗಾಯಗಳಾಗಿಲ್ಲವೆಂದು ಅವರು ಹೇಳಿದ್ದಾರೆ.
ಸ್ಫೋಟ ಘಟನೆಯ ಬೆನ್ನಲ್ಲೇ ಫ್ರಾನ್ಸ್ ಪ್ರಧಾನಿ ಎಡ್ವರ್ಡ್ ಫಿಲಿಪ್ ಅವರು ತನ್ನ ಪಕ್ಷದ ಚುನಾವಣಾ ರ್ಯಾಲಿಯನ್ನು ರದ್ದುಪಡಿಸಿದರು.
ಇದೊಂದು ಭಯೋತ್ಪಾದಕ ಕೃತ್ಯವೆಂದು ಶಂಕಿಸಿ ತನಿಖೆ ಆರಂಭಿಸಲಾಗಿದೆಯೆದಂು ಪ್ಯಾರಿಸ್ ಪ್ರಾಸಿಕ್ಯೂಟರ್ ಕಚೇರಿಯ ಹೇಳಿಕೆ ತಿಳಿಸಿದೆ.2007ರಲ್ಲಿ ಪ್ಯಾರಿಸ್‌ನ ಕಾನೂನು ಕಾರ್ಯಾಲಯದ ಮುಂದೆ ನಡೆದ ಪ್ಯಾಕೇಜ್ ಬಾಂಬ್ ಸ್ಫೋಟದಲ್ಲಿ ಓರ್ವ ಮೃತಪಟ್ಟು ಇನ್ನೊಬ್ಬರು ಗಾಯಗೊಂಡಿದ್ದರು. ಆದರೆ ಈ ದಾಳಿಯನ್ನು ಯಾರು ನಡೆಸಿದ್ದಾರೆಂಬುದನ್ನು ಪತ್ತೆ ಹಚ್ಚಲು ಪೊಲೀಸರಿಗೆ ಸಾಧ್ಯವಾಗಿರಲಿಲ್ಲ.







