ಫ್ರೆಂಚ್ ಓಪನ್‌ಗೆ ಸೆರೆನಾ ಅಲಭ್ಯ?
ಪ್ಯಾರಿಸ್, ಮೇ.25: ಅಮೆರಿಕದ ಸೆರೆನಾ ವಿಲಿಯಮ್ಸ್ ಈ ಬಾರಿ ಫ್ರೆಂಚ್ ಓಪನ್‌ಗೆ ಸಕಲ ಸಿದ್ಧತೆ ನಡೆಸಿದ್ದರೂ ಆಕೆಯ ಫಿಟ್ನೆಸ್ ಬಗ್ಗೆ ಇನ್ನೂ ಅನುಮಾನಗಳು ಕಡಿಮೆಯಾಗಿಲ್ಲ. ಇನ್ನೊಂದೆಡೆ ನವೊಮಿ ಒಸಾಕ ಮಹಿಳಾ ಆಟಗಾರ್ತಿಯರ ಪೈಕಿ ಅಗ್ರ ಶ್ರೇಯಾಂಕಿತರ ಜೊತೆ ಸ್ಥಾನ ಹಂಚಿಕೊಳ್ಳಬೇಕಾದರೆ ತನ್ನ ಅತ್ಯುತ್ತಮ ಆಟವನ್ನು ಪ್ರದರ್ಶಿಸುವ ಅಗತ್ಯವಿದೆ. 2017ರ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಜಯಿಸಿದ ನಂತರ ಸೆರೆನಾ ವೈಯಕ್ತಿಕ ಕಾರಣದಿಂದ ಕ್ರೀಡೆಯಿಂದ ದೂರ ಉಳಿದಿದ್ದರು. ಕಳೆದ ವರ್ಷ ಆಕೆ ಭರ್ಜರಿ ಆಟ ಪ್ರದರ್ಶಿಸುವ ಮೂಲಕ ಮೈದಾನಕ್ಕೆ ಮರಳಿದರಾದರೂ ವಿಂಬಲ್ಡನ್ ಫೈನಲ್‌ನಲ್ಲಿ ಆ್ಯಂಜೆಲಿಕ್ ಕೆರ್ಬರ್ ವಿರುದ್ಧ ಸೋಲೊಪ್ಪುವ ಮೂಲಕ ಅಭಿಮಾನಿಗಳನ್ನು ನಿರಾಶೆಗೊಳಿಸಿದ್ದರು. ಸದ್ಯ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಸೆರೆನಾ ಆಸ್ಟ್ರೇಲಿಯನ್ ಓಪನ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಕರೊಲಿನಾ ಪ್ಲಿಸ್ಕೋವಾ ವಿರುದ್ಧ ಸೋಲನುಭವಿಸಿದ ನಂತರ ಮೈದಾನದಿಂದ ದೂರವೇ ಉಳಿದಿದ್ದರು. ಆದರೆ ಫ್ರೆಂಚ್ ಓಪನ್‌ನಲ್ಲಿ ತನ್ನ ಅತ್ಯುತ್ತಮ ಆಟ ಪ್ರದರ್ಶಿಸುವ ಭರವಸೆಯನ್ನು ಆಕೆ ಹೊಂದಿದ್ದಾರೆ. ಇನ್ನೊಂದೆಡೆ ನವೊಮಿ ಒಸಾಕಾ ಯಾವುದೇ ಪ್ರಮುಖ ಚಾಂಪಿಯನ್‌ಶಿಪ್ ಜಯಿಸದಿದ್ದರೂ ಈ ವರ್ಷ ಮಹತ್ವದ ಸಾಧನೆ ಮಾಡುವ ಆತ್ಮವಿಶ್ವಾಸ ಹೊಂದಿದ್ದಾರೆ. ಆಸ್ಟ್ರೇಲಿಯನ್ ಓಪನ್ ನಂತರ ಕೋಚ್ ಸಾಶಾ ಬಜಿನ್ ಅವರಿಂದ ಪ್ರತ್ಯೇಕಗೊಂಡಿರುವ ಜಪಾನ್ ಆಟಗಾರ್ತಿ ಒಸಾಕ ಕೂಡಾ ಗಾಯದ ಸಮಸ್ಯೆಯ ಕಾರಣ ಇಟಾಲಿಯನ್ ಓಪನ್‌ನಿಂದ ಹೊರ ನಡೆದಿದ್ದರು.





