ಗಂಭೀರ ಗಾಯದಿಂದ ಪಾರಾದ ಆಲ್‌ರೌಂಡರ್ ವಿಜಯ ಶಂಕರ್

ಲಂಡನ್, ಮೇ 25: ಅಭ್ಯಾಸದ ವೇಳೆ ನೆಟ್ ಬೌಲರ್ ಖಲೀಲ್ ಅಹ್ಮದ್ ಚೆಂಡಿನ ಏಟಿಗೆ ಒಳಗಾಗಿರುವ ಆಲ್‌ರೌಂಡರ್ ವಿಜಯ ಶಂಕರ್ ಅವರ ಬಲತೋಳು ಬಿರುಕುಬಿಟ್ಟಿಲ್ಲ ಎಂದು ಸ್ಕ್ಯಾನಿಂಗ್ ವರದಿಯಲ್ಲಿ ಬಹಿರಂಗವಾಗಿದೆ. ಈ ಸುದ್ದಿಯು ಟೀಮ್ ಇಂಡಿಯಾಕ್ಕೆ ನಿಟ್ಟುಸಿರು ತಂದಿದೆ.
ಶುಕ್ರವಾರ ಶಂಕರ್ ಅಭ್ಯಾಸ ನಿರತರಾಗಿದ್ದ ವೇಳೆ ಈ ಘಟನೆ ನಡೆದಿದ್ದು, ಮುಂಜಾಗೃತಾ ಕ್ರಮವಾಗಿ ಸ್ಕ್ಯಾನಿಂಗ್‌ಗೆ ಒಳಗಾಗಿದ್ದರು.
ಶಂಕರ್ ಸ್ಕಾನಿಂಗ್‌ಗೆ ಒಳಪಟ್ಟಿದ್ದು, ತೋಳಿಗೆ ಯಾವುದೇ ಸಮಸ್ಯೆಯಾಗಿಲ್ಲ ಎಂದು ಗೊತ್ತಾಗಿದೆ. ಬಿಸಿಸಿಐ ವೈದ್ಯಕೀಯ ತಂಡ ಅವರ ಚೇತರಿಕೆಗೆ ನೆರವಾಗುತ್ತಿದೆ ಎಂದು ಬಿಸಿಸಿಐ ತನ್ನ ಟ್ವಿಟರ್‌ನಲ್ಲಿ ತಿಳಿಸಿದೆ.
ಗಾಯಗೊಂಡ ಕಾರಣ ತಮಿಳುನಾಡಿನ ಆಲ್‌ರೌಂಡರ್ ಭಾರತ ಶನಿವಾರ ಆಡಿದ ಮೊದಲ ಅಭ್ಯಾಸ ಪಂದ್ಯದಲ್ಲಿ ಭಾಗವಹಿಸಲು ಸಾಧ್ಯವಾಗಿಲ್ಲ. ಮಂಗಳವಾರ ಕಾರ್ಡಿಫ್‌ನಲ್ಲಿ ನಡೆಯಲಿರುವ ಎರಡನೇ ಅಭ್ಯಾಸ ಪಂದ್ಯದಲ್ಲಿ ಆಡುವುದು ಕೂಡ ಅನುಮಾನವಾಗಿದೆ.
Next Story





