ಫ್ರಾನ್ಸ್ ನಲ್ಲಿರುವ ಭಾರತೀಯ ವಾಯುಪಡೆಯ ರಫೇಲ್ ಕಚೇರಿಯಿಂದ ಹಲವು ದಾಖಲೆಗಳು ಕಳವು: ವರದಿ
ಇತ್ತೀಚೆಗೆ ಕಚೇರಿಯೊಳಕ್ಕೆ ನುಗ್ಗಿದ್ದ ಅಪರಿಚಿತರು

ಹೊಸದಿಲ್ಲಿ,ಮೇ 26: ಕಳೆದ ವಾರ ಫ್ರಾನ್ಸ್‌ನಲ್ಲಿರುವ ಭಾರತೀಯ ವಾಯುಪಡೆ(ಐಎಎಫ್)ಯ ರಫೇಲ್ ಯೋಜನೆ ನಿರ್ವಹಣೆ ತಂಡ(ಪಿಎಂಟಿ)ಕಚೇರಿಗೆ ನುಗ್ಗಿದ್ದ ಅಪರಿಚಿತರು ಮೂರು ಕೋಣೆಗಳನ್ನು ಜಾಲಾಡಿ ಹಲವಾರು ದಾಖಲೆಗಳನ್ನು ಕಳವು ಮಾಡಿದ್ದಾರೆ,ಆದರೆ ಮಹತ್ವದ ಹಾರ್ಡ್ ಡಿಸ್ಕ್‌ನ್ನು ಬಿಟ್ಟು ಹೋಗಿದ್ದಾರೆ ಎಂದು ರಕ್ಷಣಾ ಮೂಲಗಳು ತಿಳಿಸಿರುವುದಾಗಿ ಆಂಗ್ಲ ಮಾಧ್ಯಮ ಸಂಸ್ಥೆಯು ವರದಿ ಮಾಡಿದೆ. ಆದರೆ ದುಷ್ಕರ್ಮಿಗಳು ಹಾರ್ಡ್ ಡಿಸ್ಕ್‌ನ್ನು ಪರಿಶೀಲಿಸಿದ್ದರೇ ಎನ್ನುವುದು ಸ್ಪಷ್ಟವಾಗಿಲ್ಲ ಎಂದಿವೆ.
ಗ್ರೂಪ್ ಕ್ಯಾಪ್ಟನ್ ನೇತೃತ್ವದ ನಾಲ್ವರು ಐಎಎಫ್ ಅಧಿಕಾರಿಗಳನ್ನೊಳಗೊಂಡಿರುವ ಪಿಎಂಟಿಯು 36 ರಫೇಲ್ ವಿಮಾನಗಳ ಖರೀದಿಗಾಗಿ 7.87 ಶತಕೋಟಿ ಯುರೋ ಮೌಲ್ಯದ ಅಂತರ್-ಸರಕಾರಿ ಒಪ್ಪಂದದ ಅನುಷ್ಠಾನದ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದೆ. ಪಿಎಂಟಿ ಕಚೇರಿಯು ಪ್ಯಾರಿಸ್‌ನಲ್ಲಿರುವ ರಫೇಲ್ ತಯಾರಿಕೆ ಕಂಪನಿ ಡಸಾಲ್ಟ್ ಏವಿಯೇಶನ್‌ನ ಆವರಣದಲ್ಲಿದೆ.
ನಾಪತ್ತೆಯಾಗಿರುವ ದಾಖಲೆಗಳ ನಿಖರ ಸ್ವರೂಪವನ್ನು ಇನ್ನಷ್ಟೇ ನಿರ್ಧರಿಸಬೇಕಿದೆ ಎಂದು ಮೂಲಗಳು ತಿಳಿಸಿವೆ. ಆದರೆ ಐಎಎಫ್ ನಾಪತ್ತೆಯಾಗಿರುವ ದಾಖಲೆಗಳಿಂದ ಸೋರಿಕೆಯಾಗಿರುವ ಸಂಭಾವ್ಯ ಮಾಹಿತಿಯನ್ನು ಗುರುತಿಸಿದೆ. ಅವು ಪೂರೈಕೆ ಶಿಷ್ಟಾಚಾರಗಳು,ಮಾಮೂಲು ಸಂವಹನಗಳು ಮತ್ತು ಶಸ್ತ್ರಾಸ್ತ್ರ ಸಂಬಂಧಿತ ವಿವರಗಳಿಗೆ ಸಂಬಂಧಿಸಿರಬಹುದು,ಆದರೆ ಬೆಲೆ ವಿವರಗಳು ಇದರಲ್ಲಿ ಸೇರಿಲ್ಲ ಎಂದು ಇನ್ನೊಂದು ರಕ್ಷಣಾ ಮೂಲವು ತಿಳಿಸಿದೆ.
ಪ್ಯಾರಿಸ್ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಪಿಎಂಟಿ ಕಚೇರಿಗೆ ನುಗ್ಗಿದ ದಿನವೇ ಡಸಾಲ್ಟ್ ಆವರಣದಲ್ಲಿಯ ಇನ್ನೆರಡು ಕಚೇರಿಗಳಿಗೂ ದುಷ್ಕರ್ಮಿಗಳು ನುಗ್ಗಿರುವುದು ವರದಿಯಾಗಿದೆ. ಆದರೆ ಇವು ಪರಸ್ಪರ ಸಂಬಂಧಿಸಿವೆಯೇ ಎನ್ನುವುದು ಇನ್ನೂ ಗೊತ್ತಾಗಿಲ್ಲ.
ಅಪರಾಧ ಸಂಚನ್ನು ಅತ್ಯುತ್ತಮವಾಗಿ ರೂಪಿಸಲಾಗಿತ್ತು ಮತ್ತು ದುಷ್ಕರ್ಮಿಗಳು ಸಂಪೂರ್ಣ ಸಜ್ಜಿತರಾಗಿ ಬಂದಿದ್ದರು ಎಂದು ಇನ್ನೊಂದು ರಕ್ಷಣಾ ಮೂಲವು ತಿಳಿಸಿದೆ.







