ಮಾವು ಬೆಳೆ ಪ್ರೋತ್ಸಾಹ ಮೇಳದ ಉದ್ದೇಶ: ಧಾರವಾಡ ಜಿ.ಪಂ. ಸಿಇಓ ಡಾ.ಬಿ.ಸಿ.ಸತೀಶ್
ಮಾವು ಪ್ರದರ್ಶನ ಹಾಗೂ ಮಾರಾಟ ಮೇಳ-2019
ಧಾರವಾಡ, ಮೇ 26: ಪ್ರತಿ ವರ್ಷ ತೋಟಗಾರಿಕೆ ಇಲಾಖೆಯಿಂದ ಮಾವಿನ ಹಣ್ಣುಗಳ ಪ್ರದರ್ಶನ ಮತ್ತು ಮಾರಾಟ ಮೇಳ ಆಯೋಜಿಸುವ ಮೂಲಕ ಮಾವು ಬೆಳೆದ ರೈತ ಹಾಗೂ ಗ್ರಾಹಕರಿಗೆ ನೇರ ಸಂಪರ್ಕ ಕಲ್ಪಿಸಲಾಗುತ್ತಿದೆ. ಮತ್ತು ಮಾವು ಬೆಳೆಯುವುದನ್ನು ಪ್ರೋತ್ಸಾಹಿಸುವುದು ಈ ಮೇಳದ ಉದ್ದೇಶವಾಗಿದೆ ಎಂದು ಜಿಲ್ಲಾ ಪಂಚಾಯತ್ ಸಿಇಓ ಡಾ.ಬಿ.ಸಿ.ಸತೀಶ್ ಹೇಳಿದ್ದಾರೆ.
ನಗರದ ಜಿಲ್ಲಾ ತೋಟಗಾರಿಕೆ ಕಚೇರಿ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ತೋಟಗಾರಿಕೆ ಇಲಾಖೆಯಿಂದ ಆಯೋಜಿಸಿರುವ ಮಾವು ಪ್ರದರ್ಶನ ಹಾಗೂ ಮಾರಾಟ ಮೇಳ-2019ನ್ನು ಉದ್ಘಾಟಿಸಿದ ನಂತರ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಧಾರವಾಡ ಜಿಲ್ಲೆ ಮಾವು ಬೆಳೆಗೆ ಪ್ರಸಿದ್ದವಾಗಿದೆ. ಜಿಲ್ಲೆಯ ಆಪುಸ್ ಮಾವಿನ ಹಣ್ಣು ಅಮೆರಿಕಾ, ಇಂಗ್ಲೆಂಡ್ ಸೇರಿಂದತೆ ಹೊರ ದೇಶಗಳಿಗೆ ಪ್ರತಿ ವರ್ಷ ರಪ್ತು ಆಗುತ್ತದೆ. ಜಿಲ್ಲೆಯಲ್ಲಿ ಮಾವು ಬೆಳೆ ವಿಸ್ತೀರ್ಣಕ್ಕೆ ಹೆಚ್ಚು ಪ್ರೋತ್ಸಾಹ ನೀಡಲಾಗುತ್ತಿದೆ. ಈಗಾಗಲೇ ಸುಮಾರು 12 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆ ಬೆಳೆಯಲಾಗುತ್ತಿದೆ. ಇದನ್ನು ಕನಿಷ್ಠ 20 ಸಾವಿರ ಹೆಕ್ಟೆರಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ಅವರು ಹೇಳಿದರು.
ಈ ಹಿನ್ನೆಲೆಯಲ್ಲಿ ಮಾವು ಬೆಳೆ ತಾಂತ್ರಿಕತೆ, ಹನಿ ನೀರಾವರಿಯೊಂದಿಗೆ ದೇಶ ತಳಿಗಳನ್ನು ಪರಿಚಯಿಸಲಾಗುತ್ತಿದೆ. ವಿಶೇಷವಾಗಿ ಇಲ್ಲಿನ ಹವಾಮಾನಕ್ಕೆ ಹೊಂದಿಕೆಯಾಗುವ ಇಸ್ರೇಲ್ ದೇಶದ ಇಸ್ರೇಲಿ ಹೈಬ್ರಿಡ್ ಮಾವಿನ ಹಣ್ಣು ಪ್ರದರ್ಶನಕ್ಕೆ ಇಡಲಾಗಿದ್ದು, ಈ ತಳಿ ಬೆಳೆಯಲು ಪ್ರೋತ್ಸಾಹ ನೀಡಲಾಗುವುದು ಎಂದು ಸತೀಶ್ ತಿಳಿಸಿದರು.
ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಡಾ.ರಾಮಚಂದ್ರ ಮಡಿವಾಳ ಮಾತನಾಡಿ, ಮಾವು ಪ್ರದರ್ಶನ ಮತ್ತು ಮಾರಾಟ ಮೇಳವು ರೈತರು ಬೆಳೆದ ಮಾವಿನ ಹಣ್ಣಿಗೆ ನೇರ ಮಾರುಕಟ್ಟೆ ಒದಗಿಸಿ, ಗ್ರಾಹಕರನ್ನು ಪರಿಚಯಿಸುತ್ತದೆ. ಕಳೆದ ವರ್ಷದ ಮಾವು ಮೇಳದಲ್ಲಿ 1 ಕೋಟಿ 29 ಸಾವಿರ ರೂ.ಗಳ ವ್ಯವಹಾರವಾಗಿತ್ತು. ಈ ವರ್ಷ ಕನಿಷ್ಟ 2 ಕೋಟಿ ರೂ.ಗಳ ವ್ಯಾಪಾರ ಮಾಡಿಸಲು ಉದ್ದೇಶಿಸಲಾಗಿದೆ ಎಂದು ಅವರು ಹೇಳಿದರು.
ಈ ವರ್ಷದ ಮಾವು ಮೇಳದಲ್ಲಿ ಸುಮಾರು 75ಕ್ಕೂ ಹೆಚ್ಚು ವಿವಿಧ ತಳಿಯ ಮಾವಿನ ಹಣ್ಣು ಮಾರಾಟಕ್ಕೆ ಬಂದಿವೆ. ಮತ್ತು ಸಾರ್ವಜನಿಕರಲ್ಲಿ ಮಾವು ಬೆಳೆ ಪ್ರೋತ್ಸಾಹ ಹಾಗೂ ವಿವಿಧ ತಳಿಯ ಮಾವು ಪರಿಚಯಿಸಲು ಪ್ರತ್ಯೇಕ ಪ್ರದರ್ಶನ ಮಳಿಗೆ ಮಾಡಿ, ನೂರಕ್ಕು ಹೆಚ್ಚು ಮಾವಿನ ಹಣ್ಣು, ಕಾಯಿಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ ಎಂದು ಸತೀಶ್ ತಿಳಿಸಿದರು.
ಮಾವು ಮೇಳ ಉದ್ಘಾಟನೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ವಿಜಯಲಕ್ಷ್ಮಿ ಪಾಟೀಲ್, ಅಪರ ಜಿಲ್ಲಾಧಿಕಾರಿ ಡಾ.ಸುರೇಶ್ ಹಿಟ್ನಾಳ್, ಹಾಪ್‌ಕಾಮ್ಸ್ ಜಿಲ್ಲಾ ಅಧ್ಯಕ್ಷ ಈಶ್ವರ್‌ಚಂದ್ರ ಹೊಸಮನಿ, ನಿರ್ದೇಶಕರಾದ ಡಿ.ಟಿ.ಪಾಟೀಲ್, ಉಳವಪ್ಪ ದಾಸನೂರ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಪ್ರಶಾಂತ್ ಕುಲಕರ್ಣಿ, ಹಾಪ್ ಕಾಮ್ಸ್ ಜಿಲ್ಲಾ ವ್ಯವಸ್ಥಾಪಕ ನಿರ್ದೇಶಕ ಪ್ರವೀಣ ಕಾಮಾಟಿ ಹಾಗೂ ಇತರರು ಉಪಸ್ಥಿತರಿದ್ದರು.







