ಸಂಸದನಾದ ಇನ್ ಸ್ಪೆಕ್ಟರ್ ಗೆ ಮೇಲಧಿಕಾರಿಯ ಸೆಲ್ಯೂಟ್: ಫೋಟೊ ವೈರಲ್

ಹೈದರಾಬಾದ್, ಮೇ 26: ಜನಪ್ರತಿನಿಧಿಗಳಿಗೆ ಸೆಲ್ಯೂಟ್ ಮಾಡುತ್ತಿದ್ದ ವ್ಯಕ್ತಿ ಇದೀಗ ಸೆಲ್ಯೂಟ್ ಪಡೆಯುವ ಜನಪ್ರತಿನಿಧಿಯಾಗಿದ್ದಾರೆ. ಇದು ಆಂಧ್ರಪ್ರದೇಶದ ಪೊಲೀಸ್ ವೃತ್ತ ನಿರೀಕ್ಷಕ ಗೋರಂಟ್ಲ ಮಾಧವ್ ಅವರ ವಿಶಿಷ್ಟ ಪಯಣ.
ಅನಂತಪುರ ಜಿಲ್ಲೆ ಹಿಂದೂಪುರದಿಂದ ಅವರು ಇದೀಗ ನೂತನ ಸಂಸದರಾಗಿ ಆಯ್ಕೆಯಾಗಿದ್ದಾರೆ. ಇದೀಗ ಮಾಧವ್ ಹಾಗೂ ಅವರ ಮಾಜಿ ಬಾಸ್ ಸಿಐಡಿ ಡೆಪ್ಯುಟಿ ಸುಪರಿಂಟೆಂಡೆಂಟ್ ಆಫ್ ಪೊಲೀಸ್ ಮೆಹಬೂಬ್ ಬಾಷಾ ಅವರು ಇತರ ಸಿಬ್ಬಂದಿಯ ಸಮ್ಮುಖದಲ್ಲಿ ಆತ್ಮೀಯತೆಯ ನಗು ಹಾಗೂ ಸೆಲ್ಯೂಟ್ ವಿನಿಮಯ ಮಾಡಿಕೊಳ್ಳುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕದಿರಿ ಠಾಣೆಯಲ್ಲಿ ಸರ್ಕಲ್ ಇನ್‍ಸ್ಪೆಕ್ಟರ್ ಆಗಿದ್ದ ಮಾಧವ್, ವೈಎಸ್‍ಆರ್ ಕಾಂಗ್ರೆಸ್ ಪಕ್ಷದ ಟಿಕೆಟ್ ನಲ್ಲಿ ಹಿಂದೂಪುರ ಕ್ಷೇತ್ರದಿಂದ 1.40 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ತೆಲುಗುದೇಶಂ ಪಕ್ಷದ ಸಂಸದ ಕೃಸ್ತಪ್ಪ ನಿಮ್ಮಲ ವಿರುದ್ಧ ಗೆಲುವು ಸಾಧಿಸಿ ಆಯ್ಕೆಯಾಗಿದ್ದಾರೆ.
ಈ ಫೋಟೊವನ್ನು ಮತ ಎಣಿಕೆ ಮಾಡುವಾಗ ಸೆರೆ ಹಿಡಿಯಲಾಗಿದೆ. ಈ ವೈರಲ್ ಫೋಟೊ ಬಗ್ಗೆ ಮಾತನಾಡಿದ ಮಾಧವ್, “ಮೊದಲು ಮಾಜಿ ಬಾಸ್ ಗೆ ನಾನು ಸೆಲ್ಯೂಟ್ ಮಾಡಿದ್ದಾಗಿ” ಸ್ಪಷ್ಟಪಡಿಸಿದ್ದಾರೆ. “ಅವರನ್ನು ನಾನು ಗೌರವಿಸುತ್ತೇನೆ. ಇದು ನಮ್ಮ ನಡುವಿನ ಪರಸ್ಪರ ಗೌರವ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಕಳೆದ ಡಿಸೆಂಬರ್ ನಲ್ಲಿ ಸ್ವಯಂನಿವೃತ್ತಿ ಪಡೆದಿದ್ದ ಮಾಧವ್, ಚುನಾವಣೆಗೆ ಸ್ಪರ್ಧಿಸುವ ಸಲುವಾಗಿಯೇ ಈ ನಿರ್ಧಾರ ಕೈಗೊಂಡಿದ್ದರು. ಜನವರಿಯಲ್ಲಿ ವೈಎಸ್‍ಆರ್ ಕಾಂಗ್ರೆಸ್ ಅವರಿಗೆ ಟಿಕೆಟ್ ಘೋಷಿಸಿತ್ತು. ಆದರೆ ಅವರ ರಾಜೀನಾಮೆಯನ್ನು ಪೊಲೀಸ್ ಇಲಾಖೆ ಅಂಗೀಕರಿಸಲಿಲ್ಲ ಎಂಬ ಕಾರಣಕ್ಕೆ ನಾಮಪತ್ರವನ್ನು ಆರಂಭದಲ್ಲಿ ಚುನಾವಣಾ ಆಯೋಗ ತಿರಸ್ಕರಿಸಿತ್ತು. ಕೊನೆಕ್ಷಣದಲ್ಲಿ ರಾಜ್ಯ ಆಡಳಿತಾತ್ಮಕ ನ್ಯಾಯಮಂಡಳಿ ಮಧ್ಯಪ್ರವೇಶಿಸಿ, ಅವರ ರಾಜೀನಾಮೆಯನ್ನು ಆಂಗೀಕರಿಸುವಂತೆ ಹಾಗೂ ಕರ್ತವ್ಯದಿಂದ ಬಿಡುಗಡೆ ಮಾಡುವಂತೆ ಪೊಲೀಸ್ ಮಹಾನಿರ್ದೇಶಕರಿಗೆ ಸೂಚನೆ ನೀಡಿತ್ತು. ಆ ಬಳಿಕ ಮಾಧವ್ ಚುನಾವಣಾ ಹಾದಿ ಸುಗಮವಾಯಿತು.







