ನನ್ನನ್ನು ಆಪರೇಷನ್ ಕಮಲಕ್ಕೆ ಸೆಳೆಯುವ ಧೈರ್ಯ ಬಿಜೆಪಿಯವರಿಗಿದೆಯೇ ?
ಕಾಂಗ್ರೆಸ್ ಶಾಸಕ ಶರಣ ಬಸಪ್ಪಗೌಡ ದರ್ಶನಾಪುರ ಪ್ರಶ್ನೆ

ಯಾದಗಿರಿ, ಮೇ 26: ‘ನನ್ನನ್ನು ಆಪರೇಷನ್ ಕಮಲಕ್ಕೆ ಸೆಳೆಯುವಷ್ಟು ಧೈರ್ಯ ಬಿಜೆಪಿಯ ಯಾವುದೇ ನಾಯಕರಿಗೂ ಇಲ್ಲ. ನನ್ನ ಸಮೀಪವೂ ಸುಳಿಯುವುದಿಲ್ಲ. ಕಾಂಗ್ರೆಸ್ ಪಕ್ಷದಿಂದ ಗೆದ್ದು, ಬಿಜೆಪಿಗೆ ಹೋಗುವ ಪ್ರಮೇಯವೇ ಇಲ್ಲ ಎಂದು ಶಹಾಪುರ ಕ್ಷೇತ್ರದ ಶಾಸಕ ಶರಣ ಬಸಪ್ಪಗೌಡ ದರ್ಶನಾಪುರ ಸ್ಪಷ್ಟಪಡಿಸಿದ್ದಾರೆ.
ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಅಗತ್ಯ ಸಂಖ್ಯಾಬಲವಿಲ್ಲದೆ ಬಿಜೆಪಿ ಸರಕಾರ ರಚನೆ ಕನಸು ಕಾಣುತ್ತಿದೆ. ಕಾಂಗ್ರೆಸ್- ಜೆಡಿಎಸ್ ಸರಕಾರ ಬೀಳುತ್ತದೆ. ಬಿಜೆಪಿ ಸರಕಾರ ಬರುತ್ತದೆ ಎಂದು ಕೇಳಿ ಕೇಳಿ ಸಾಕಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಬಿಜೆಪಿ 105 ಶಾಸಕರನ್ನು ಇಟ್ಟುಕೊಂಡು ಸರಕಾರ ಬದಲಾವಣೆ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದ ಅವರು, ವಾಮಮಾರ್ಗದ ಮೂಲಕ ಮೈತ್ರಿ ಸರಕಾರ ಅಸ್ಥಿರಗೊಳಿಸದೆ ಜನಾದೇಶದಂತೆ ವಿಪಕ್ಷ ಸ್ಥಾನದಲ್ಲಿ ಕೂತು ಸರಕಾರಕ್ಕೆ ಸಲಹೆ ನೀಡಲಿ ಎಂದು ತಿರುಗೇಟು ನೀಡಿದರು.
ತಮ್ಮ ಜವಾಬ್ದಾರಿ ಮರೆತಿರುವ ಬಿಜೆಪಿ ಕಾಂಗ್ರೆಸ್-ಜೆಡಿಎಸ್ ಶಾಸಕರಿಗೆ 30 ರಿಂದ 50 ಕೋಟಿ ರೂ.ಆಮಿಷ ಒಡ್ಡುತ್ತಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದ ಅವರು, ಶಾಸಕ ರಮೇಶ್ ಜಾರಕಿಹೋಳಿ ಕಾಂಗ್ರೆಸ್ ಪಕ್ಷಕ್ಕೆ ಅನಿವಾರ್ಯವಲ್ಲ. ಅವರು ಬಿಜೆಪಿಗೆ ಹೋಗುವುದಾದರೆ ಹೋಗಲಿ ಎಂದು ಹೇಳಿದರು.
ಹೋಗುವರಿಗೆ ಕಟ್ಟಿ ಹಾಕಿ ಉಳಿಸಿಕೊಳ್ಳಲು ಸಾಧ್ಯವಿಲ್ಲ. ಬಿಜೆಪಿಗೆ ಹೋಗುವರು, ತನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೋಗಲಿ ಎಂದ ಅವರು, ಮೈತ್ರಿ ಸರಕಾರದಲ್ಲಿ ಸಣ್ಣ-ಪುಟ್ಟ ಸಮಸ್ಯೆಗಳಿರುವುದು ಸಹಜ. ಕುಮಾರಸ್ವಾಮಿಯವರೆ ಇನ್ನೂ ನಾಲ್ಕು ವರ್ಷ ಮುಖ್ಯಮಂತ್ರಿಯಾಗಿರಲಿದ್ದಾರೆ ಎಂದರು.







