ಮರಗಳ ಸರ್ವೇಗೆ ಮುಂದಾದ ಬಿಬಿಎಂಪಿ

ಬೆಂಗಳೂರು, ಮೇ.26: ಉದ್ಯಾನನಗರಿ ಎಂದೇ ಪ್ರಚಲಿತವಾದ ಬೆಂಗಳೂರಿನಲ್ಲಿ ಎಷ್ಟು ಮರಗಳಿವೆ ? ಎಲ್ಲೆಲ್ಲಿವೆ? ಯಾವ ತಳಿಗಳ ಮರಗಳು ಹೆಚ್ಚಿವೆ ? ಎಂಬ ಅಧಿಕೃತ ಮಾಹಿತಿಯೇ ಇಲ್ಲ. ಇದನ್ನು ತಿಳಿಯಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮರಗಳ ಸರ್ವೇ ನಡೆಸಲು ಮುಂದಾಗಿದೆ.
ಹೌದು, ನಗರ ಹಸಿರಿನಿಂದ ಕಂಗೊಳಿಸುವುದಕ್ಕೆ, ಅಧಿಕ ಸಂಖ್ಯೆಯಲ್ಲಿ ಉದ್ಯಾನವನಗಳಿರುವುದನ್ನು ಗಮನಿಸಿ ಬೆಂಗಳೂರನ್ನು ಉದ್ಯಾನ ನಗರಿ ಎನ್ನುತ್ತೇವೆ. ಆದರೆ, ಸಿಲಿಕಾನ್ ಸಿಟಿಯಲ್ಲಿ ಎಷ್ಟು ಮರಗಳಿವೆ ಎಂಬುದರ ಬಗ್ಗೆ ಅಧಿಕೃತ ಸರ್ವೇ ನಡೆದಿಲ್ಲ. ನಗರ ಪಾಲಿಕೆ ಆರಂಭದಿಂದ ಈವರೆಗೂ ಮರಗಳ ಎಣಿಕೆ ಕಾರ್ಯ ಬಿಬಿಎಂಪಿ ಮಾಡಿಲ್ಲ. ಆದ್ದರಿಂದ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಮರಗಳ ಸರ್ವೇಗಾಗಿಯೇ 2 ಕೋಟಿ ರೂ. ಮೀಸಲಿಡಲಾಗಿದ್ದು, ನೀತಿ ಸಂಹಿತೆ ಮುಗಿದ ನಂತರ ಟ್ರೀ ಅಥಾರಿಟಿ ಸಹಕಾರದೊಂದಿಗೆ ಸರ್ವೇ ನಡೆಸಲು ಸಿದ್ಧವಾಗಿದೆ.
ಮರಗಳ ಸರ್ವೇ ಕಾರ್ಯಕ್ಕೆ ಐಐಎಸ್‌ಸಿಯ ನೆರವು ಪಡೆಯಲು ಚಿಂತಿಸಿದ್ದು, ಹೇಗೆ ಸರ್ವೇ ಮಾಡಬೇಕು ಎಂಬ ಬಗ್ಗೆ ಸಭೆ ನಡೆಸಿ, ಸರ್ವೇ ಕಾರ್ಯಕ್ಕೆ ಮುಂದಾಗಲಿದೆ. ಒಮ್ಮೆ ಸರ್ವೆ ಕಾರ್ಯ ಆರಂಭವಾದರೆ ಕನಿಷ್ಟ 6 ತಿಂಗಳಲ್ಲಿ ಮುಗಿಸುವ ಚಿಂತನೆ ಬಿಬಿಎಂಪಿ ಹೊಂದಿದ್ದು, ಸರ್ವೆ ನಂತರ ವಾರ್ಡ್‌ವಾರು ಲೆಕ್ಕ, ಹಾರ್ಡ್‌ವೇರ್, ಸ್‌ಟಾವೇರ್, ಜಿಪಿಎಸ್ ಮಾಹಿತಿ ಸಿದ್ಧ ಪಡಿಸಿ ಅಂತಿಮ ವರದಿ ಪ್ರಕಟಿಸಲಿದೆ.
ಟೆಂಡರ್ ಮೂಲಕ ಸರ್ವೆ?: ಮುಂಬೈ ಮಹಾನಗರದಲ್ಲಿ ಅಲ್ಲಿನ ಪಾಲಿಕೆ ಮರಗಳ ಸರ್ವೇ ಕಾರ್ಯ ಎನ್‌ಜಿಒಗಳಿಗೆ ವಹಿಸಿದ್ದು, ಅಕ್ರಮದ ಆರೋಪಗಳು ಕೇಳಿ ಬಂದಿದ್ದವು. ಇದನ್ನು ಮನಗಂಡಿರುವ ಪಾಲಿಕೆ ಟೆಂಡರ್ ಮೂಲಕ ಸರ್ವೆ ನಡೆಸಲು ಚಿಂತಿಸಿದ್ದು, ಪರಿಸರ ವಿಜ್ಞಾನಿಗಳ ಜೊತೆ ಚರ್ಚಿಸಿ, ಅವರ ಸಹಕಾರ ಪಡೆಯಲಿದೆ. ಐಐಎಸ್‌ಸಿಯೂ ಈಗಾಗಲೇ ಮರಗಳ ಸರ್ವೇ ನಡೆಸಿದ್ದು, ಈ ವರದಿಯೂ ಸರ್ವೆಗೆ ಅನುಕೂಲವಾಗಲಿದೆ. ಮರಗಳ ಸರ್ವೆಯಲ್ಲಿ ದೊಡ್ಡ ಸವಾಲನ್ನೇ ಎದುರಿಸಲು ಪಾಲಿಕೆ ಮುಂದಾಗಿದ್ದು, ಸಂಪೂರ್ಣ ಸರ್ವೇ ನಡೆದ ಅಧಿಕೃತ ಮಾಹಿತಿ ತಿಳಿಯಲಿದೆ.
ಹೇಗಿರಲಿದೆ ಮರಗಳ ಸರ್ವೇ?
* ಪಾಲಿಕೆ ವ್ಯಾಪ್ತಿಯ 198 ವಾರ್ಡ್‌ಗಳಲ್ಲಿ ಎಷ್ಟು ಮರಗಳಿವೆ ಎಂಬುದನ್ನು ವಾರ್ಡ್‌ವಾರು ಲೆಕ್ಕ ಹಾಕಲಾಗುವುದು.
* ಯಾವ ಮರ ಯಾವ ತಳಿಯದ್ದಿದೆ ಎಂಬುದನ್ನು ತಿಳಿಯುವುದು.
* ಎಷ್ಟು ವರ್ಷ ಮರ ಜೀವಂತವಾಗಿರುತ್ತದೆ. ಅದರ ಸ್ಥಿತಿ ಹೇಗಿದೆ ಎಂಬ ವರದಿ ಮಾಡುವುದು.
* ಯಾವ ಭಾಗದಲ್ಲಿ ಮರವಿದೆ ಎಂಬುದರ ಬಗ್ಗೆ ಜಿಪಿಎಸ್ ಮಾಹಿತಿ ನೀಡಬೇಕು.
* ಯಾವ ರಸ್ತೆಯಲ್ಲಿ ಎಷ್ಟು ಮರಗಳಿವೆ. ಯಾವ ತಳಿಯದ್ದಿವೆ ಎಂಬುದನ್ನು ತಿಳಿಯುವುದು.







