ಪಾಕಿಸ್ತಾನಿ ಪ್ರಜೆಗಳನ್ನು ತವರಿಗೆ ತಲುಪಿಸಿದ ಬೆಂಗಳೂರು ಪೊಲೀಸರು
ಬೆಂಗಳೂರು, ಮೇ 26: ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದ ಇಬ್ಬರು ಪಾಕಿಸ್ತಾನಿ ಪ್ರಜೆಗಳನ್ನು ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರು ಸೇಫ್ ಆಗಿ ವಾಘಾ ಗಡಿಗೆ ತಲುಪಿಸಿದ್ದಾರೆ.
ಪಾಕಿಸ್ತಾನದ ಕರಾಜಿ ಜಿಲ್ಲೆಯ ಚಕ್ರಫೋಟ್ ಪ್ರದೇಶದಿಂದ ಬೆಂಗಳೂರಿಗೆ ಬಂದಿದ್ದ ಕಾಸೀಫ್ ಶಂಶುದ್ಧೀನ್ ಹಾಗೂ ಕಿರಾಣ್ ಗುಲಾಮ್ ಎಂಬುವರನ್ನು 2017ರ ಮೇ ತಿಂಗಳಲ್ಲಿ ಸಿಸಿಬಿ ಪೊಲೀಸರು ನಗರದಲ್ಲಿ ಬಂಧಿಸಿದ್ದರು. ಕುಮಾರಸ್ವಾಮಿ ಲೇಔಟ್ ಬಳಿ ವಾಸವಿದ್ದ ದಂಪತಿ ವಿರುದ್ಧ ಕುಮಾರಸ್ವಾಮಿ ಲೇಔಟ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 420ಎ, 465, 468 ಅಡಿಯಲ್ಲಿ ದೂರು ದಾಖಲಾಗಿತ್ತು.
ವೀಸಾ ಅವಧಿ ಮುಗಿದ ನಂತರವೂ ದಂಪತಿಗಳು ರಾಜ್ಯದಲ್ಲೇ ಅಕ್ರಮವಾಗಿ ನೆಲೆಸಿದ ಆರೋಪದ ಮೇಲೆ ಬನಶಂಕರಿ ಮತ್ತು ಕುಮಾರಸ್ವಾಮಿ ಲೇಔಟ್ ಠಾಣಾ ಪೊಲೀಸರು ದಂಪತಿಯನ್ನು ಬಂಧಿಸಿ ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿದ್ದರು. ನಗರದ ಸಿಟಿ ಸಿವಿಲ್ ಕೋರ್ಟ್ ದಂಪತಿಗೆ 42 ತಿಂಗಳು ಕಾರಾಗೃಹ ಶಿಕ್ಷೆಯನ್ನು ವಿಧಿಸಿತ್ತು. ದಂಪತಿಗಳು 'ಈಗಾಗಲೇ 21 ತಿಂಗಳು ಕಾರಾಗೃಹ ಶಿಕ್ಷೆಯನ್ನು ಅನುಭವಿಸಿದ್ದೇವೆ. ಹೀಗಾಗಿ, ಶಿಕ್ಷೆಯ ಅವಧಿಯನ್ನು ಕಡಿತಗೊಳಿಸಬೇಕೆಂದು' ಹೈಕೋರ್ಟ್‌ಗೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಪೀಠವು ದಂಪತಿಗಳನ್ನು ಶೀಘ್ರದಲ್ಲಿಯೇ ಪಾಕಿಸ್ತಾನಕ್ಕೆ ಹಸ್ತಾಂತರಿಸಿ ಎಂದು ಆದೇಶಿಸಿತ್ತು. ಹೀಗಾಗಿ, ಕುಮಾರಸ್ವಾಮಿ ಲೇಔಟ್ ಠಾಣಾ ಪೊಲೀಸರು ಮೇ 9ರಂದು ದಂಪತಿಳನ್ನು ವಾಘಾ ಗಡಿಗೆ ತಲುಪಿಸಿದ್ದಾರೆ.







