ಗದ್ದಿಗೌಡರ್‌ಗೆ ಸಚಿವ ಸ್ಥಾನ ನೀಡಲು ಆಗ್ರಹ: ಬೆಂಬಲಿಗರಿಂದ ಪ್ರಧಾನಿಗೆ ಟ್ವೀಟ್ ಸಂದೇಶ

ಬಾಗಲಕೋಟ, ಮೇ 26: ಬಾಗಲಕೋಟೆ ಸಂಸದ ಪಿ.ಸಿ.ಗದ್ದಿಗೌಡರ್ ಅವರಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಪ್ರಧಾನಿ ನರೇಂದ್ರ ಮೋದಿಯವರಿಗೆ ಟ್ವೀಟ್ ಮೂಲಕ ಸಂದೇಶ ಕಳುಹಿಸಿ ಆಗ್ರಹಿಸಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ದೇಶಾದ್ಯಂತ ಭರ್ಜರಿ ಜಯಬೇರಿ ಬಾರಿಸಿದ ಬೆನ್ನಲ್ಲೇ, ಕೇಂದ್ರದಲ್ಲಿ ಮಂತ್ರಿ ಮಂಡಲ ರಚನೆಯ ಕಸರತ್ತು ಜೋರಾಗಿ ನಡೆದಿದೆ. ಕರ್ನಾಟಕ ರಾಜ್ಯ ಈ ಬಾರಿಯ ಚುನಾವಣೆಯಲ್ಲಿ 25 ಜನ ಸಂಸದರನ್ನು ನೀಡಿರುವ ಹಿನ್ನೆಯಲ್ಲಿ ಮೋದಿ ಸರಕಾರ ಕರ್ನಾಟಕಕ್ಕೆ ಹೆಚ್ಚಿನ ಮಂತ್ರಿ ಸ್ಥಾನ ನೀಡಲು ನಿರ್ಧರಿಸಿದೆ ಎನ್ನಲಾಗಿದೆ. ಇದರಿಂದ ಸತತ ನಾಲ್ಕು ಬಾರಿ ಗೆಲುವಿನ ನಗೆ ಬೀರಿರುವ ಗದ್ದಿಗೌಡರ್ ಕೂಡ ರೇಸ್‌ನಲ್ಲಿದ್ದು, ಬಾಗಲಕೋಟೆಗೆ ಕೇಂದ್ರ ಮಂತ್ರಿ ಸ್ಥಾನ ಒಲಿಯುವ ಸಾಧ್ಯತೆ ದಟ್ಟವಾಗಿದೆ.
ಫಲಿತಾಂಶದ ಹಿಂದಿನ ದಿನವೇ ಕೇಂದ್ರದ ಬಿಜೆಪಿ ಕಾರ್ಯಾಲಯ ಗದ್ದಿಗೌಡರ್ ಅವರ ಸಂಪೂರ್ಣ ಮಾಹಿತಿಯನ್ನ ಪಡೆದುಕೊಂಡಿದೆ. ಹೀಗಾಗಿ, ಬಾಗಲಕೋಟೆ ಸಂಸದರಿಗೆ ಮಂತ್ರಿ ಸ್ಥಾನ ಸಿಗುವುದು ಖಚಿತ ಎನ್ನಲಾಗುತ್ತಿದೆ. ಇನ್ನು, ಗೆಲುವಿನ ನಗೆ ಬೀರಿರುವ ಗದ್ದಿಗೌಡರ್ ಇದು ಕಾರ್ಯಕರ್ತರ ಗೆಲುವು, ಜನರ ಆಶಿರ್ವಾದ ಎಂದು ಬಣ್ಣಿಸಿದ್ದಾರೆ. ಕಳೆದ 2004ರ ಲೋಕಸಭೆ ಚುನಾವಣೆಯಿಂದ ಅಖಾಡ ಪ್ರವೇಶಿಸಿದ ಪಿ.ಸಿ.ಗದ್ದಿಗೌಡರ್ ಅಲ್ಲಿಂದ ಇಲ್ಲಿಯವರೆಗೂ ಹಿಂದೆ ತಿರುಗಿ ನೋಡಿದ್ದೇ ಇಲ್ಲ. ಬಾಗಲಕೋಟೆ ಕ್ಷೇತ್ರದಲ್ಲಿ ಪ್ರಬಲ ಲಿಂಗಾಯತ ಗಾಣಿಗ ಸಮುದಾಯದ ಗದ್ದಿಗೌಡರ್ ಸತತ ನಾಲ್ಕು ಬಾರಿ ಗೆಲ್ಲುವುದರ ಮೂಲಕ ದಾಖಲೆ ನಿರ್ಮಿಸಿದ್ದಾರೆ.
ಜನತಾ ಪರಿವಾರದಿಂದ ಹೊರ ಬಂದು ಕಳೆದ 2004ರಲ್ಲಿ ಬಿಜೆಪಿಯಿಂದ ಲೋಕಸಭೆಗೆ ಪ್ರವೇಶಿಸಿದ ಗದ್ದಿಗೌಡರ್ ಕಾಂಗ್ರೆಸ್ ಭದ್ರಕೋಟೆಯನ್ನು ಛಿದ್ರಮಾಡಿ ಗೆಲುವಿನ ಬಾವುಟ ಹಾರಿಸಿದವರು. ಈ ಹಿಂದೆ ಜನತಾ ಪಕ್ಷದಲ್ಲಿ ಸ್ಥಳೀಯ ಸಂಸ್ಥೆಗಳ ಮೂಲಕ ವಿಧಾನಪರಿಷತ್ತಿಗೆ ಅವಿರೋಧವಾಗಿ ಆಯ್ಕೆಯಾಗಿದ್ದರು. ಜಿಲ್ಲಾ ಪುನರ್‌ವಿಂಗಡನೆ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದು, ಹೀಗೆ ರಾಜಕೀಯದ ಹಲವು ಮಜಲುಗಳನ್ನು ದಾಟಿ ಸದಾ ಗೆಲುವಿನ ಅಲೆಯಲ್ಲಿ ತೇಲುತ್ತಿರುವ ಗದ್ದಿಗೌಡರ್ ಅವರಿಗೆ ಲಿಂಗಾಯತ ಕೋಟಾದಲ್ಲಿ ಮಂತ್ರಿಗಿರಿ ಒಲಿಯುವ ಸಾಧ್ಯತೆ ಇದೆ.
ಬಾಗಲಕೋಟೆ ಕ್ಷೇತ್ರದಲ್ಲಿ ಗಾಣಿಗ ಸಮುದಾಯ ನಿರ್ಣಾಯಕವಾಗಿರುವುದರಿಂದ ಈ ಬಾರಿ ಲಿಂಗಾಯತ ಕೋಟಾದ ಅಡಿಯಲ್ಲಿ ಮಂತ್ರಿಗಿರಿ ಭಾಗ್ಯ ಒಲಿಯುತ್ತದೆಯೋ ಎಂದು ಕಾದು ನೋಡಬೇಕಾಗಿದೆ.







