ವ್ಯವಸ್ಥೆಯಲ್ಲಿ ಕಾರ್ಮಿಕರ ಕೈಗಳಿಗೆ ಗೌರವ ಸಿಗುತ್ತಿಲ್ಲ: ಕಾರ್ಮಿಕ ಇಲಾಖೆ ಜಂಟಿ ಆಯುಕ್ತ ಶ್ರೀಪಾದ
ಬೆಂಗಳೂರು, ಮೇ.26: ಸಮಾಜಕ್ಕಾಗಿ ದುಡಿಯುವ ಕಾರ್ಮಿಕ ಕೈಗಳಿಗೆ ಈ ವ್ಯವಸ್ಥೆಯಲ್ಲಿ ಗೌರವ ಸಿಗದೆ, ಉಳ್ಳವರಿಗೆ ಸಿಗುತ್ತಿದೆ ಎಂದು ರಾಜ್ಯ ಕಾರ್ಮಿಕ ಇಲಾಖೆ ಜಂಟಿ ಆಯುಕ್ತ ಶ್ರೀಪಾದ ಬೇಸರ ವ್ಯಕ್ತಪಡಿಸಿದ್ದಾರೆ.
ರವಿವಾರ ಚಾಮರಾಜಪೇಟೆಯ ಕಸಾಪ ಸಭಾಂಗಣದಲ್ಲಿ ನಗರ ಜಿಲ್ಲಾ ಕಸಾಪ ಆಯೋಜಿಸಿದ್ದ ಕಾರ್ಮಿಕ ಶ್ರಮಜೀವಿಗಳ ಸಮ್ಮಿಲನ ಕಾರ್ಯಕ್ರಮದಲ್ಲಿ ಕನ್ನಡ ಸೇವಾರತ್ನ ಹಾಗೂ ಕನ್ನಡ ಆದರ್ಶ ದಂಪತಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ದೇಶಕ್ಕೆ ಹೆಚ್ಚಿನ ಸೇವೆಯನ್ನು ಮಾಡುತ್ತಿರುವವರು ಕಾರ್ಮಿಕರು. ಅವರು ನಿಜವಾದ ದೇಶದ ಶಿಲ್ಪಿಗಳಾಗಿದ್ದು, ನಗರಿಕರಣ ಯಂತ್ರೀಕರಣ ಕಾಲದಲ್ಲಿ ಕಾರ್ಮಿಕರನ್ನು ಅಭಿನಂದಿಸುತ್ತಿರುವುದು ಶ್ಲಾಘನೀಯವಾದುದು ಎಂದು ಹೇಳಿದರು.
ಬರಹಗಾರರಿಗೆ ಪೆನ್ನು ಬಹಳ ಮುಖ್ಯ. ಅಂತಹ ಬರಹಗಾರರಿಗೆ ಪೆನ್ನು ಕೊಡುವವರು ಕಾರ್ಮಿಕರು. ನಿಜವಾದ ರಾಷ್ಟ್ರೀಯ ನಿರ್ಮಾಪಕರು ಕಾರ್ಮಿಕರು. ಹೀಗಾಗಿ, ಕಾರ್ಮಿಕ ಸಂಘಟನೆಗಳನ್ನು ಕಟ್ಟಿ ಬೆಳೆಸಿದ ಮುಖಂಡರನ್ನು ಕುರಿತಾದ ಕೃತಿಗಳು ಇಲ್ಲದಿರುವುದು ಬೇಸರದ ಸಂಗತಿ ಎಂದರು.
ಈಗ ನಾಡಿನಲ್ಲಿ ಕಾರ್ಮಿಕರು ಉತ್ತಮ ವೇತನ ಪಡೆದು ಉತ್ತಮವಾಗಿ ಕುಟುಂಬ ನಿರ್ವಹಣೆ ಮಾಡುತ್ತಿದ್ದಾರೆ ಎಂದರೆ, ಅದಕ್ಕೆಲ್ಲ ಕಾರ್ಮಿಕ ಸಂಘಟನಾ ಮುಖಂಡರ ಹೋರಾಟವೇ ಕಾರಣ. ಇಂದಿನ ಪೀಳಿಗೆಗೆ ಹೋರಾಟದ ಪ್ರತಿಫಲದ ಅರಿವಿಲ್ಲ. ಕಾರ್ಮಿಕರಿಗೆ ತೊಂದರೆಯಾದರೆ ಕಾರ್ಮಿಕ ಸಂಘಟನೆ ಬಳಿ ತಮ್ಮ ಅಳಲು ತೋಡಿಕೊಳ್ಳುತ್ತಾರೆ. ಆದರೆ ಸಂಘಟನೆಯಲ್ಲಿ ನಿರಂತರಾಗಿರುವ ಕಾರ್ಮಿಕ ಮುಖಂಡರ ಕಷ್ಟ ಸುಖಗಳನ್ನು ಕೇಳುವವರು ಯಾರು ಇರುವುದಿಲ್ಲ ಎಂದರು.
ಸಮಾರಂಭದಲ್ಲಿ ಕಾರ್ಮಿಕ ಮುಖಂಡ ಮೈಕಲ್ ಫರ್ನಾಂಡಿಸ್, ಎಚ್.ವಿ.ಅನಂತ ಸುಬ್ಬರಾವ್ ಹಾಗೂ ಎಂ.ತಿಮ್ಮಯ್ಯ ಉಪಸ್ಥಿತರಿದ್ದರು.







