ಚುನಾವಣೆಯಲ್ಲಿ ಸೋಲು; ಜೈಲಿನಲ್ಲಿ ಮಧ್ಯಾಹ್ನದ ಊಟ ತ್ಯಜಿಸಿದ ಲಾಲೂ ಯಾದವ್

ರಾಂಚಿ,ಮೇ.26: ಲೋಕಸಭಾ ಚುನಾವಣೆಯಲ್ಲಿ ಬಿಹಾರದಲ್ಲಿ ತನ್ನ ಪಕ್ಷ ಹೀನಾಯವಾಗಿ ಸೋಲನುಭವಿಸಿರುವುದರಿಂದ ಹತಾಶರಾಗಿರುವ ಮಾಜಿ ಮುಖ್ಯಮಂತ್ರಿ ಮತ್ತು ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಜೈಲಿನಲ್ಲಿ ಮಧ್ಯಾಹ್ನದ ಊಟ ಸೇವಿಸಲು ನಿರಾಕರಿಸುತ್ತಿದ್ದಾರೆ ಮತ್ತು ಹೆಚ್ಚಿನ ಸಮಯ ಮೌನವಾಗಿಯೇ ಕಳೆಯುತ್ತಿದ್ದಾರೆ ಎಂದು ರಾಂಚಿಯ ರಾಜೇಂದ್ರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಲಾಲೂ ಆರೋಗ್ಯದ ಮೇಲುಸ್ತುವಾರಿ ನೋಡಿಕೊಳ್ಳುತ್ತಿರುವ ಉಮೇಶ್ ಪ್ರಸಾದ್ ತಿಳಿಸಿದ್ದಾರೆ.
2019ರ ಲೋಕಸಭಾ ಚುನಾವಣೆಯಲ್ಲಿ ಆರ್‌ಜೆಡಿ, ಒಂದೊಮ್ಮೆ ತನ್ನ ಭದ್ರಕೋಟೆಯಾಗಿದ್ದ ಬಿಹಾರ ಮತ್ತು ಜಾರ್ಖಂಡ್‌ನಲ್ಲಿ ಒಂದು ಸ್ಥಾನವನ್ನು ಗೆಲ್ಲಲೂ ವಿಫಲವಾಗಿದೆ. 2014ರಲ್ಲಿ ಮೋದಿ ಅಲೆಯ ಮಧ್ಯೆಯೂ ಆರ್‌ಜೆಡಿ ಬಿಹಾರದಲ್ಲಿ ನಾಲ್ಕು ಸ್ಥಾನಗಳನ್ನು ಗಳಿಸಿತ್ತು. ಕಳೆದ ಎರಡು ಮೂರು ದಿನಗಳಲ್ಲಿ ಲಾಲೂ ಯಾದವ್ ಅವರ ದಿನಚರಿ ಬದಲಾಗಿದೆ. ಅವರು ಬೆಳಗ್ಗಿನ ಉಪಹಾರ ಮತ್ತು ರಾತ್ರಿ ಊಟ ಸೇವಿಸುತ್ತಾರೆ. ಆದರೆ ಮಧ್ಯಾಹ್ನದ ಊಟ ಸೇವಿಸುತ್ತಿಲ್ಲ. ಅವರಿಗೆ ದಿನದಲ್ಲಿ ಮೂರು ಬಾರಿ ಇನ್ಸುಲಿನ್ ನೀಡಲಾಗುತ್ತಿದೆ. ಆದರೆ ಅವರು ಸರಿಯಾಗಿ ಆಹಾರ ಸೇವಿಸುತಿಲ್ಲವಾದ್ದರಿಂದ ಅವರಿಗೆ ಇನ್ಸುಲಿನ್‌ನ ಸರಿಯಾದ ಪ್ರಮಾಣ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಪ್ರಸಾದ್ ತಿಳಿಸಿದ್ದಾರೆ.





