‘ರೈತರೊಂದಿಗೆ ಕಣ್ಣು ಮುಚ್ಚಾಲೆ ಆಡುತ್ತಿರುವ ಮುಂಗಾರು ಮಳೆ’
ಬೆಂಗಳೂರು, ಮೇ 26: ಮೇ ಕೊನೆಯ ವಾರ ಕಾಲಿಡುತ್ತಿದ್ದರೂ ಮುಂಗಾರು ಮಳೆಯ ಮೊಡಗಳು ಬಂಗಾಳ ಕೊಲ್ಲಿ ಮತ್ತು ಅರಬ್ಬಿ ಸಮುದ್ರದಲ್ಲಿ ದುರ್ಬಲವಾಗಿದ್ದಲ್ಲದೇ ನಿಧಾನವಾಗಿ ಸಾಗುತ್ತಿರುವುದನ್ನು ನೋಡಿದರೆ ರೈತರೊಂದಿಗೆ ಕಣ್ಣು ಮುಚ್ಚಾಲೆ ಆಟ ಆಡುತ್ತಿರುವುದು ಆಂತಕವನ್ನು ಸೃಷ್ಟಿಸಿದೆ ಎಂದು ಧಾರವಾಡ ಕೃಷಿ ವಿವಿಯ ಕೃಷಿ ಹವಾಮಾನ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಆರ್.ಎಚ್. ಪಾಟೀಲ್ ತಿಳಿಸಿದ್ದಾರೆ.
ಮುಂದಿನ ವಾರದಲ್ಲಿ ಕರ್ನಾಟಕದ ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲಿ ಬಿಸಿಲಿನ ಬೇಗೆ ಮುಂದುವರೆಯಲಿದ್ದು ಅಲ್ಲಲ್ಲಿ ಗುಡುಗು ಮತ್ತು ಗಾಳಿ ಸಮೇತ ಮಳೆಯಾಗುವ ಸಾಧ್ಯತೆಗಳಿವೆ. ಆದುದರಿಂದ, ಎಲ್ಲೆಲ್ಲಿ ಈ ಬೇಸಿಗೆ ಮಳೆಗಳು ಬೀಳುತ್ತವೆಯೊ ಆ ಕ್ಷೇತ್ರದ ರೈತರು ತಮ್ಮ ಭೂಮಿಯನ್ನು ಹದ ಮಾಡಿಕೊಂಡು ಬಿತ್ತನೆಗೆ ಬೀಜ ಮತ್ತು ಗೊಬ್ಬರ ಕಾಯ್ದಿರಿಸಿಕೊಂಡು ತಯಾರಾಗುವುದು ಅತೀ ಸೂಕ್ತ ಎಂದು ಅವರು ಹೇಳಿದ್ದಾರೆ.
ಈಗಾಗಲೇ ಉತ್ತರ ಕರ್ನಾಟಕದ ಕೆಲವು ಪ್ರದೇಶಗಳಲ್ಲಿ ಅಲ್ಪ ಸ್ವಲ್ಪ ಮುಂಗಾರು ಪೂರ್ವ ಮಳೆಯಾಗಿದ್ದು, ರೈತರು ಬೀಜ ಸಂಗ್ರಹಿಸುವ ಅಥವಾ ಖರೀದಿಸುವ ಚಟುವಟಿಕೆಗಳಲ್ಲಿ ತೊಡಗಿದ್ದು ಕಂಡು ಬಂದಿದೆ. ಇಂತಹ ರೈತರು ಹೆಸರು, ಉದ್ದು, ಸೋಯಾ, ಅವರೆ ಹಾಗೂ ಶೇಂಗಾ ಬೆಳೆಗಳ ಪ್ರಮಾಣೀಕರಿಸಿದ ಬೀಜಗಳನ್ನು ಧಾರವಾಡದ ಕೃಷಿ ವಿಶ್ವವಿದ್ಯಾಲಯ ಮತ್ತು ಕೃಷಿ ಇಲಾಖೆಯ ಸಮೀಪದ ರೈತ ಸಂಪರ್ಕ ಕೇಂದ್ರ ಇಲ್ಲವೆ ಸಮೀಪದ ಕರ್ನಾಟಕ ರಾಜ್ಯದ ಬೀಜ ನಿಗಮಗಳಿಂದಲೇ ಖರೀದಿಸುವುದು ಸೂಕ್ತ ಎಂದು ಅವರು ತಿಳಿಸಿದ್ದಾರೆ.
ಭಾರತ ಹವಾಮಾನ ಭಾಗದ ಇತ್ತೀಚಿನ ಮುನ್ಸೂಚನೆಯ ಪ್ರಕಾರ ಮುಂಗಾರು ಮಳೆಗಳು ಕೇರಳ ರಾಜ್ಯವನ್ನು ಜೂ.6ರ ಸುಮಾರಿಗೆ ತಲುಪುವ ಸಾಧ್ಯತೆಗಳು ಹೆಚ್ಚಾಗಿದ್ದು, ಉತ್ತರ ಕರ್ನಾಟಕಕ್ಕೆ ಸರಿ ಸುಮಾರು ಒಂದು ವಾರ ತಡವಾಗಿ ಬರುವ ಸಾಧ್ಯತೆಗಳು ಹೆಚ್ಚು. ಇದಲ್ಲದೇ ಹವಾಮಾನ ಮುನ್ಸೂಚನೆ ಕೊಡುವ ಬಹುತೇಕ ಖಾಸಗಿ ಸಂಸ್ಥೆಗಳೂ ಬರುವ ಮುಂಗಾರು ಜೂನ್ ತಿಂಗಳಲ್ಲಿ ವಾಡಿಕೆಗಿಂತ ಕಡಿಮೆಯಿರುವುದು ಶೇ.80ರಷ್ಟು ಸಂಭಾವನೆ ಇರುವುದಾಗಿ ತಿಳಿಸಿವೆ ಎಂದು ಆರ್.ಎಚ್.ಪಾಟೀಲ್ ಹೇಳಿದ್ದಾರೆ.
ಆದುದರಿಂದ, ರೈತರು ತಮ್ಮ ತಮ್ಮ ಕ್ಷೇತ್ರದ ಮುಂಗಾರು ಪೂರ್ವ (ಬೇಸಿಗೆ ಮಳೆ) ಮತ್ತು ಮುಂಗಾರು ಮಳೆಯ ಪ್ರಮಾಣವನ್ನು ಆಧರಿಸಿ ಬೆಳೆ ಆಯ್ಕೆ ಮಾಡುವುದು ಬಹಳ ಸೂಕ್ತ ಮತ್ತು ಅವಶ್ಯಕತೆಯಿದೆ. ಅಲ್ಲದೆ, ಬಿತ್ತುವ ಪೂರ್ವ ತಮ್ಮ ಸಮೀಪದ ರೈತ ಸಂಪರ್ಕ ಕೇಂದ್ರ ಇಲ್ಲವೆ ಕೃಷಿ ವಿಶ್ವವಿದ್ಯಾಲಯದ ಸಂಶೋಧನಾ ಕೇಂದ್ರಗಳ ತಜ್ಞರನ್ನು ಸಂಪರ್ಕಿಸಿ ಬೆಳೆ ಯೋಜನೆಯನ್ನು ಮತ್ತು ತಳಿಗಳ ಆಯ್ಕೆ ನಿರ್ಧರಿಸಬೇಕೆಂದು ಅವರು ಸಲಹೆ ನೀಡಿದ್ದಾರೆ.







