ಮೇ 30ರಂದು ಮೋದಿ ಪ್ರಮಾಣ ವಚನ ಸ್ವೀಕಾರ

ಹೊಸದಿಲ್ಲಿ, ಮೇ.26: ಅಭೂತಪೂರ್ವ ಬಹುಮತದೊಂದಿಗೆ ಎರಡನೇ ಅವಧಿಗೆ ಚುನಾಯಿತರಾಗಿರುವ ಪ್ರಧಾನಿ ನರೇಂದ್ರ ಮೋದಿ ಗುರುವಾರ, ಮೇ 30ರಂದು ರಾಷ್ಟ್ರಪತಿ ಭವನದಲ್ಲಿ ಸಂಜೆ ಏಳು ಗಂಟೆಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಟ್ವೀಟ್ ಮಾಡಿದ್ದಾರೆ.
ಈಗಾಗಲೇ ರಾಷ್ಟ್ರಪತಿ ಕೋವಿಂದ್ ಅವರನ್ನು ಭೇಟಿಯಾಗಿರುವ ಪ್ರಧಾನಿ ಮೋದಿ ಕೇಂದ್ರದಲ್ಲಿ ಸರಕಾರ ರಚಿಸಲು ಹಕ್ಕು ಮಂಡಿಸಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ 545 ಸದಸ್ಯ ಬಲದ ಲೋಕಸಭೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ 352 ಸ್ಥಾನಗಳನ್ನು ಗೆಲ್ಲುವ ಮೂಲಕ ಅದ್ವಿತೀಯ ಸಾಧನೆ ಮಾಡಿದೆ. ಸದ್ಯ ನೂತನ ಸಚಿವರ ಹೆಸರುಗಳನ್ನು ಗೌಪ್ಯವಾಗಿಡಲಾಗಿದ್ದರೂ ಪ್ರಧಾನಿಯ ಜೊತೆಗೆ ಅವರ ಸಂಪುಟದ ನೂತನ ಸಚಿವರೂ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ ಎನ್ನುವುದು ರಾಷ್ಟ್ರಪತಿಗಳ ಟ್ವೀಟ್‌ನಿಂದ ಬಯಲಾಗಿದೆ.
ಸದ್ಯ ಸರಕಾರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಆಗಮಿಸುತ್ತಿರುವ ಅತಿಥಿಗಳ ಪಟ್ಟಿಯನ್ನೂ ಬಿಡುಗಡೆ ಮಾಡಿಲ್ಲ. 2014ರಲ್ಲಿ ಈ ಕಾರ್ಯಕ್ರಮಕ್ಕೆ ಪಾಕಿಸ್ತಾನದ ಅಂದಿನ ಪ್ರಧಾನಿ ನವಾಝ್ ಶರೀಫ್ ಸೇರಿದಂತೆ ಸಾರ್ಕ್ ದೇಶದ ನಾಯಕರನ್ನು ಆಹ್ವಾನಿಸಲಾಗಿತ್ತು. ಸಚಿವ ಸಂಪುಟದಲ್ಲಿ ಹೊಸ ಮುಖಗಳನ್ನು ಸೇರಿಸಲು ಪ್ರಧಾನಿಯವರ ಆಪ್ತ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಬಯಸಿದ್ದಾರೆ. ಅದರಲ್ಲೂ ಬಿಜೆಪಿ 18 ಸ್ಥಾನಗಳನ್ನು ಗೆದ್ದಿರುವ ಪಶ್ಚಿಮ ಬಂಗಾಳಕ್ಕೆ ಹೆಚ್ಚಿನ ಪ್ರಾತಿನಿಧ್ಯ ಸಿಗಲಿದೆ ಎಂದು ನಂಬಲಾಗಿದೆ.
ಅನಾರೋಗ್ಯದಿಂದ ಬಳಲುತ್ತಿರುವ ಅರುಣ್ ಜೇಟ್ಲಿ ವಿತ್ತ ಸಚಿವರಾಗಿ ಮುಂದುವರಿಯುವುದು ಅನುಮಾನ ಮತ್ತು ಅಮೇಠಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಐತಿಹಾಸಿಕ ಗೆಲುವು ದಾಖಲಿಸಿರುವ ಜವುಳಿ ಖಾತೆ ಸಚಿವೆ ಸ್ಮೃತಿ ಇರಾನಿಗೆ ಈ ಬಾರಿ ಪ್ರಮುಖ ಹುದ್ದೆಯನ್ನು ನೀಡಲಾಗುವುದು ಎಂಬ ಮಾತುಗಳು ಕೇಳಿಬಂದಿವೆ.







