ರಫೇಲ್ ಒಪ್ಪಂದದ ಬಗ್ಗೆ ಸಿಬಿಐ ತನಿಖೆಗೆ ಆದೇಶಿಸುವ ಪ್ರಶ್ನೆಯೇ ಇಲ್ಲ: ಸುಪ್ರೀಂಗೆ ಕೇಂದ್ರದ ಹೇಳಿಕೆ

ಹೊಸದಿಲ್ಲಿ, ಮೇ 26: ರಫೇಲ್ ಯುದ್ಧವಿಮಾನ ಒಪ್ಪಂದದ ಬಗ್ಗೆ ಪ್ರಥಮ ಮಾಹಿತಿ ವರದಿ(ಎಫ್‌ಐಆರ್) ದಾಖಲಿಸುವ ಅಥವಾ ಸಿಬಿಐ ತನಿಖೆಗೆ ಆದೇಶಿಸುವ ಪ್ರಶ್ನೆಯೇ ಇಲ್ಲ ಎಂದು ಸುಪ್ರೀಂಕೋರ್ಟ್‌ಗೆ ಕೇಂದ್ರ ಸರಕಾರ ತಿಳಿಸಿದೆ.
ಕಳೆದ ಡಿಸೆಂಬರ್ 14ರಂದು ಪ್ರಕರಣದ ಬಗ್ಗೆ ಸಿಬಿಐ ತನಿಖೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿ ತೀರ್ಪು ನೀಡಿತ್ತು. ಈ ತೀರ್ಪನ್ನು ಮರುಪರಿಶೀಲಿಸಲು ಕೋರಿ ಸಲ್ಲಿಸಲಾಗಿರುವ ಅರ್ಜಿಗಳನ್ನೂ ತಳ್ಳಿಹಾಕಬೇಕೆಂದು ಕೋರಿ ಕೇಂದ್ರ ಸರಕಾರ ಸಲ್ಲಿಸಿರುವ 39 ಪುಟಗಳ (ಅಫಿದಾವಿತ್)ಲಿಖಿತ ಹೇಳಿಕೆಯಲ್ಲಿ , ಸಿಎಜಿ ಸಲ್ಲಿಸಿರುವ ವರದಿಯು ಯುದ್ಧವಿಮಾನಗಳ ಖರೀದಿ ಬೆಲೆ ಭಾರೀ ಹೆಚ್ಚಿದೆ ಎಂಬ ಹೇಳಿಕೆ ಸುಳ್ಳೆಂದು ಸಾಬೀತುಗೊಳಿಸಿದೆ ಎಂದು ತಿಳಿಸಲಾಗಿದೆ.
ಅಲ್ಲದೆ , ಮೂಲ ದರಕ್ಕಿಂತ ಶೇ.2.86ರಷ್ಟು ಕಡಿಮೆ ದರದಲ್ಲಿ 36 ಯುದ್ಧವಿಮಾನಗಳನ್ನು ಖರೀದಿಸಲಾಗುತ್ತಿದೆ ಎಂದು ಸಿಎಜಿ ವರದಿಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಅಧಿಕ ಬೆಲೆ ಪಾವತಿಸುವ ಮೂಲಕ ಕ್ರಿಮಿನಲ್ ಅಪರಾಧ ಎಸಗಲಾಗಿದೆ ಎಂಬ ಅರ್ಜಿದಾರರ ವಾದವನ್ನು ಸಿಎಜಿ ವರದಿ ಸುಳ್ಳಾಗಿಸಿದೆ ಎಂದು ಸರಕಾರ ಅಫಿದಾವಿತ್‌ನಲ್ಲಿ ತಿಳಿಸಿದೆ ಎಂದು ಸುದ್ಧಿಸಂಸ್ಥೆ ವರದಿ ಮಾಡಿದೆ.
ಡಿಸೆಂಬರ್ 14ರ ತೀರ್ಪಿನ ಮೊದಲೇ ಲೆಕ್ಕಪತ್ರ ಪರಿಶೋಧಕರ ವರದಿಯಲ್ಲಿ ಸಂಸತ್ತಿನಲ್ಲಿ ಮಂಡಿಸಲಾಗಿದೆ ಎಂದು ನ್ಯಾಯಾಲಯವನ್ನು ನಂಬಿಸುವ ಮೂಲಕ ಸರಕಾರ ನ್ಯಾಯಾಲಯದ ದಾರಿ ತಪ್ಪಿಸಿದೆ ಎಂಬ ಅರ್ಜಿದಾರರ ಹೇಳಿಕೆಯನ್ನು ನಿರಾಕರಿಸಿದ ಸರಕಾರ, ಇಲ್ಲಿ ಒಂದು ಭಾಷೆಯನ್ನು ತಪ್ಪಾಗಿ ಅರ್ಥೈಸಿಕೊಂಡಿರುವ ಬಗ್ಗೆ ಅರ್ಜಿದಾರರು ಅನಗತ್ಯವಾಗಿ ಕೋಲಾಹಲ ಎಬ್ಬಿಸಿದ್ದಾರೆ ಎಂದಿದೆ.







