ಜಿನೇವಾ ಓಪನ್ ಪ್ರಶಸ್ತಿ ಜಯಿಸಿದ ಝ್ವೆರೆವ್
ಜಿನೇವಾ, ಮೇ 26: ಚಿಲಿಯ ನಿಕೊಲಸ್ ಜರ್ರಿ ಅವರನ್ನು ಮಣಿಸಿ ಜಿನೇವಾ ಓಪನ್ ಟೆನಿಸ್ ಪ್ರಶಸ್ತಿಯನ್ನು ಜಯಿಸಿದ ಜರ್ಮನಿಯ ಅಲೆಕ್ಸಾಂಡರ್ ಝ್ವೆರೆವ್ ರವಿವಾರ ಪ್ಯಾರಿಸ್ನಲ್ಲಿ ಆರಂಭವಾಗಿರುವ ಫ್ರೆಂಚ್ ಓಪನ್ಗೆ ಭರ್ಜರಿ ತಯಾರಿ ನಡೆಸಿದ್ದಾರೆ.
ರವಿವಾರ ನಡೆದ ಮಳೆಬಾಧಿತ ಪುರುಷರ ಸಿಂಗಲ್ಸ್ ಫೈನಲ್ನಲ್ಲಿ ಅಗ್ರ ಶ್ರೇಯಾಂಕದ ಝ್ವೆರೆವ್ ಅವರು ನಿಕೊಲಸ್ರನ್ನು 6-3, 3-6, 7-6(8) ಸೆಟ್ಗಳಿಂದ ಸೋಲಿಸಿದ್ದಾರೆ. ಕಳೆದ ವರ್ಷ ಇಟಾಲಿಯನ್ ಓಪನ್ ಪ್ರಶಸ್ತಿ ಜಯಿಸಿದ ಬಳಿಕ ಆವೆಮಣ್ಣಿನ ಅಂಗಣದಲ್ಲಿ ಮೊದಲ ಪ್ರಶಸ್ತಿ ಜಯಿಸಲು ಯಶಸ್ವಿಯಾದರು.
2 ಗಂಟೆ ಹಾಗೂ 35 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಮಳೆ ಎರಡು ಬಾರಿ ಪಂದ್ಯಕ್ಕೆ ಅಡ್ಡಿಪಡಿಸಿತು. ನವೆಂಬರ್ನಲ್ಲಿ ಲಂಡನ್ನಲ್ಲಿ ಎಟಿಪಿ ಫೈನಲ್ಸ್ ನಲ್ಲಿ ಪ್ರಶಸ್ತಿ ಜಯಿಸಿದ ಬಳಿಕ ಈ ಋತುವಿನಲ್ಲಿ ಝ್ವೆರೆವ್ ಯಾವುದೇ ಪ್ರಶಸ್ತಿ ಜಯಿಸಿಲ್ಲ.
Next Story