ಮಾನಸಿಕ ಗುಲಾಮಗಿರಿ ಸ್ವತಂತ್ರ ಚಿಂತನೆಗೆ ಅಡ್ಡಿ: ಎಂ.ಆರ್.ವೆಂಕಟೇಶ್
ಮಂಗಳೂರು,ಮೇ.27:ಮಾನಸಿಕ ಗುಲಾಮಗಿರಿಯಿಂದ ಹೊರಬರದೆ ಇದ್ದರೆ ಸ್ವತಂತ್ರ ಚಿಂತನೆ ಸಾದ್ಯವಿಲ್ಲ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪರಿವರ್ತನವಾದ) ರಾಜ್ಯ ಸಮಿತಿಯ ಸಂಚಾಲಕ ಎಂ.ಆರ್.ವೆಂಕಟೇಶ್ ತಿಳಿಸಿದ್ದಾರೆ. ನಗರದ ನಂತೂರು ಶಾಂತಿಕಿರಣದ ಕೃಷ್ಣಪ್ಪ ವೇದಿಕೆಯಲ್ಲಿ ಭಗವಾನ್ ಬುದ್ಧ ಜಯಂತಿಯ ಅಂಗವಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಹಮ್ಮಿಕೊಂಡ ಎರಡು ದಿನಗಳ ಅಧ್ಯಯನ ಶಿಬಿರದ ಎರಡನೆ ದಿನದ ಗೊಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು. ಸ್ವತಂತ್ರ ಚಿಂತನೆಯಿಂದ ಮಾತ್ರ ದಲಿತರು ಸಶಕ್ತತೆಯನ್ನು ಸಾಧಿಸಬಹುದು ಎನ್ನುವುದು ಡಾ.ಬಾಬಾ ಸಾಹೇಬ ಅಂಬೇಡ್ಕರರು ಚಿಂತನೆಯಾಗಿತ್ತು. ದಲಿತರು ಸಂಘಟನೆಯಾಗುವುದರ ಜೊತೆಗೆ ಆರ್ಥಿಕ ,ಸಾಮಾಜಿಕ,ಶೈಕ್ಷಣಿಕ ಆರೋಗ್ಯ ಸುಧಾರಣೆಯತ್ತ ಗಮನಹರಿಸಬೇಕಾಗಿದೆ ಎಂದು ವೆಂಕಟೇಶ್ ತಿಳಿಸಿದ್ದಾರೆ.
ಮೀಸಲಾತಿಯ ಪ್ರಯೋಜನ ಕೇವಲ ದಲಿತರು ಮಾತ್ರ ಪಡೆಯುತ್ತಿಲ್ಲ, ಮಹಿಳೆಯರಿಗೆ, ವಿಕಲಚೇತನರಿಗೆ ಮೀಸಲಾತಿಯನ್ನು ನೀಡಲಾಗುತ್ತದೆ. ಈ ವರ್ಗದಲ್ಲಿ ಎಲ್ಲಾ ಜಾತಿ, ಧರ್ಮದ ಜನರು ಅವಕಾಶವನ್ನು ಪಡೆಯುತ್ತಾರೆ. ಸ್ವತಂತ್ರ ಚಿಂತನೆಯಿಲ್ಲದೆ, ಗುಲಾಮಗಿರಿಯ ಚಿಂತನೆಯನ್ನು ಹೊಂದಿರುವ ಸಂಘಟನೆಗಳಲ್ಲಿ ಸಂಘಟನಾ ಶಕ್ತಿ ಬಲಗೊಂಡಿದ್ದರೂ ಮಾನಸಿಕ ಗುಲಾಮಗಿರಿ ಇರುತ್ತದೆ ದಲಿತ ಸಮುದಾಯದಲ್ಲಿ ಈ ರೀತಿಯ ಮನೋಭಾವವನ್ನು ಗುರುತಿಸಿದ ಅಂಬೇಡ್ಕರ್ ಮೊದಲು ಅದರಿಂದ ಹೊರಬರುವಂತೆ ಕರೆ ನೀಡಿದ್ದಾರೆ ಎನ್ನುವುದನ್ನು ನಾವು ನೆನಪಿಸಿಕೊಳ್ಳಬೇಕಾಗಿದೆ ಎಂದು ಎಂ.ಆರ್.ವೆಂಕಟೇಶ್ ಹೇಳಿದರು.
ಶಿಕ್ಷಣದ ಮೂಲಕ ದಲಿತರು ಜಾಗೃತರಾಬೇಕಾಗಿದೆ. ಸಂವಿಧಾನ ನಮಗೆ ನೀಡಿರುವ ಹಕ್ಕು ಅವಕಾಶಗಳನ್ನು ಅರ್ಥಮಾಡಿಕೊಂಡು ಶಿಕ್ಷಣದ ಮೂಲಕ ಆ ಅವಕಾಶವನ್ನು ಪಡೆಯಬಹುದು ಎಂದು ಉಪನ್ಯಾಸ ನೀಡಿದ ಮೀನುಗಾರಿಕಾ ಕಾಲೇಜಿನ ಸಹ ನಿರ್ದೇಶಕ ಡಾ.ಶಿವಕುಮಾರ್ ಮಗಧ ತಿಳಿಸಿದ್ದಾರೆ.
ಬೌದ್ಧ ದಮ್ಮ ಜಾತಿ ರಹಿತವಾದ ಸಮಾಜವನ್ನು ಎತ್ತಿಹಿಡಿದ ಧರ್ಮವಾಗಿದೆ. ಮನುಷ್ಯ ಸತ್ತ ನಂತರ ಏನಾಗುತ್ತಾನೆ ಎನ್ನುವ ಪರಲೊಕದ ಚಿಂತನೆಗಿಂತ ಹೆಚ್ಚಾಗಿ ಇಹಲೋಕದ ಬದುಕಿನಲ್ಲಿ ಸತ್ಕರ್ಮಗಳನ್ನು ಮಾಡುತ್ತಾ ಬದುಕುವುದರಲ್ಲಿ ಸಾರ್ಥಕ್ಯ ಇದೆ ಎಂದು ಬುದ್ದನ ಬೋಧನೆಗಳು ನಮಗೆ ಮಾರ್ಗದರ್ಶನ ನೀಡುತ್ತವೆ. ಮನುಷ್ಯನಿಗೆ ತನ್ನನ್ನು ತಾನು ತಿಳಿದುಕೊಳ್ಳುವುದೇ ಅರಿವು ಎನ್ನುವುದನ್ನು ಬುದ್ಧ ನಿನಗೆ ನೀನೇ ಬೆಳಕು ಎಂದು ಹೇಳಿದ್ದಾರೆ ಎಂದು ಕೊಳ್ಳೆಗಾಲದ ಬುದ್ಧ ವಿಹಾರದ ಭಂತೇಜಿ ಸುಖಶಪಾಲ್ ಹೇಳಿದರು.
ವಿಚಾರಗೋಷ್ಠಿಯಲ್ಲಿ ಕೆ.ಮುನಿರಾಜು ,ರಮೇಶ್ ಕೊಟ್ಯಾನ್,ಅಶೋಕ್ ಕೊಂಚಾಡಿ ಮೊದಲಾದವರು ಉಪಸ್ಥಿತರಿದ್ದರು.







