ತುಮಕೂರು: ಶೇ 7.5 ಮೀಸಲಾತಿಗೆ ಒತ್ತಾಯಿಸಿ ಜೂನ್ 9 ರಿಂದ ನಾಯಕ ಸಮುದಾಯದ ಪಾದಯಾತ್ರೆ

ತುಮಕೂರು,ಮೇ 27: ಕೇಂದ್ರ ಸರಕಾರ ಪರಿಶಿಷ್ಟ ಪಂಗಡಕ್ಕೆ ನೀಡಿರುವ ಶೇ 7.5ರಷ್ಟು ಮೀಸಲಾತಿಯನ್ನು ರಾಜ್ಯ ಸರಕಾರವೂ ಜಾರಿಗೊಳಿಸುವಂತೆ ಒತ್ತಾಯಿಸಿ, ವಾಲ್ಮೀಕಿ ಸಮಾಜದ ಸ್ವಾಮೀಜಿಯವರ ನೇತೃತ್ವದಲ್ಲಿ ನಡೆಯುತ್ತಿರುವ ಈ ಹೋರಾಟ ಯಶಸ್ವಿಯಾಗಲು ಸಮುದಾಯದ ಎಲ್ಲಾ ಮುಖಂಡರು ತಮ್ಮ ತನು, ಮನ, ದನ ಸಹಾಯ, ಸಹಕಾರ ನೀಡುವಂತೆ ಮಾಜಿ ಶಾಸಕ ಹಾಗೂ ರಾಜ್ಯ ಅಪೇಕ್ಸ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಮನವಿ ಮಾಡಿದ್ದಾರೆ.
ನಗರದ ಹೊರಪೇಟೆಯ ಶ್ರೀವಾಲ್ಮೀಕಿ ಪತ್ತಿನ ಸಹಕಾರ ಸಂಘದಲ್ಲಿ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ಅವರು, ಮೀಸಲಾತಿ ಭಿಕ್ಷೆಯಲ್ಲ, ಅದು ನಮ್ಮ ಜನ್ಮಸಿದ್ದ ಹಕ್ಕು. 1978ರಲ್ಲಿಯೇ ಈ ಬಗ್ಗೆ ಹೋರಾಟಗಳು ಆರಂಭವಾಗಿದ್ದರೂ, ನಮ್ಮ ಸಮುದಾಯದ ನಾಯಕರ ಓಲೈಕೆ ರಾಜಕಾರಣದಿಂದ ಉದ್ಯೋಗ ನೇಮಕಾತಿಯಲ್ಲಿ ರಾಜ್ಯ ಸರಕಾರ ಇದುವರೆಗೂ 7.5ರಷ್ಟು ಮೀಸಲಾತಿ ಜಾರಿಗೆ ತಂದಿಲ್ಲ. ಶ್ರೀಪ್ರಸನ್ನಾನಂದ ಸ್ವಾಮೀಜಿ ನೇತೃತ್ವದಲ್ಲಿ ನಡೆಯುತ್ತಿರುವ ಈ ಹೋರಾಟ ಅಂತಿಮವಾಗಿದ್ದು, ಇದರಲ್ಲಿ ನಾವು ಸ್ಪಷ್ಟ ಫಲಿತಾಂಶ ಪಡೆಯಲೇಬೇಕಿದೆ. ಹಾಗಾಗಿ ಸ್ವಾಮೀಜಿಯವರ ಕೈ ಬಲಪಡಿಸುವ ಮೂಲಕ ಜೂನ್ 9 ರಿಂದ ಹರಿಹರದ ರಾಜನಹಳ್ಳಿಯ ವಾಲ್ಮೀಕಿ ಸಂಸ್ಥಾನ ಮಠದಿಂದ ಆರಂಭವಾಗುವ ಪಾದಯಾತ್ರೆಗೆ ಅಗತ್ಯ ಬೆಂಬಲ ನೀಡಿ, ವಾಲ್ಮೀಕಿ ಸಮುದಾಯದ ಶಕ್ತಿ ಪ್ರದರ್ಶನಕ್ಕೆ ಮುಂದಾಗಬೇಕಿದೆ ಎಂದರು.
ಪ್ರಸ್ತುತ ರಾಜ್ಯದ ಸಮ್ಮಿಶ್ರ ಸರಕಾರ ಕೋಮಾದಲ್ಲಿದೆ. ಕೃತಕ ಗಾಳಿ ಪೈಪ್ ತೆಗೆದ ತಕ್ಷಣ ಬಿದ್ದು ಹೋಗಲಿದೆ. ಈ ತಿಂಗಳ 31 ರೊಳಗೆ ಎಲ್ಲವೂ ತಿಳಿಯಲಿದೆ. ಹಾಗಾಗಿ ಒಂದು ವೇಳೆ ಸರಕಾರ ಬಿದ್ದುಹೋದರೆ, ಜೂನ್ 9 ರಂದು ಹಮ್ಮಿಕೊಂಡಿರುವ ಪಾದಯಾತ್ರೆಯನ್ನುಮುಂದೂಡಬೇಕಾಗಬಹುದು. ಆದರೆ ಯಾವುದೇ ಕಾರಣಕ್ಕೆ ರದ್ದು ಪಡಿಸುವುದು ಬೇಡ. ಸಾಮಾಜಿಕ ಜಾಲತಾಣದಲ್ಲಿ ಏನೇ ಹರಿದಾಡಿದರೂ ಅದಕ್ಕೆ ತಲೆ ಕೆಡಿಸಿಕೊಳ್ಳಲು ಹೋಗಬೇಡಿ. ಜನಶಕ್ತಿಯ ಮುಂದೆ ಯಾವುದೇ ತಂತ್ರ, ಕುತಂತ್ರಗಳು ನಡೆಯುವುದಿಲ್ಲ. ಸ್ವಾಮೀಜಿ ಅವರ ಜೊತೆಗೆ ಸೇರಿ ಸಮಾಜಕ್ಕೆ ನ್ಯಾಯ ಒದಗಿಸೋಣ ಎಂದು ಕೆ.ಎನ್.ಆರ್ ಸಮುದಾಯದವರಿಗೆ ಧೈರ್ಯ ತುಂಬಿದರು.
ಪರಿಶಿಷ್ಟ ಪಂಗಡಕ್ಕೆ ಯಾವುದೇ ಶೋಷಿತ ಜಾತಿಯನ್ನು ಸೇರಿಸಲು ನಮ್ಮ ಅಡ್ಡಿಯಿಲ್ಲ. ಆದರೆ ಆ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಲಿ. ಅಲ್ಲದೆ ಮೊದಲು ಕೇಂದ್ರದ ರೀತಿ ಶೇ 7.5 ಮೀಸಲಾತಿ ಜಾರಿಗೆ ಮಾಡಲಿ ಎಂಬುದು ನಮ್ಮ ಪ್ರಬಲ ಬೇಡಿಕೆ. ಕೇಂದ್ರ ಸರಕಾರ ನಮ್ಮ ಪರವಾಗಿದೆ. ಆ ದೃಷ್ಟಿಯಿಂದಲೇ ಉತ್ತರ ಕರ್ನಾಟಕದಲ್ಲಿ ನಮ್ಮ ಸಮುದಾಯಕ್ಕೆ ಸೇರಿದ ಮೂರ್ನಾಲ್ಕು ಜನ ಸಂಸದರಾಗಿ ಆಯ್ಕೆಯಾಗಿದ್ದಾರೆ. ಯಾರು ಎಲ್ಲೇ ಇರಲಿ, ನಾನು ಕಾಂಗ್ರೆಸ್ ಪಕ್ಷವನ್ನು ಬಿಡುವುದಿಲ್ಲ ಎಂದು ಸ್ಪಷ್ಟನೆ ನೀಡಿದ ಅವರು, ನಮ್ಮ ಜೊತೆಗೆ ಇತರೆ ಹಿಂದುಳಿದ ವರ್ಗಗಳ ಸಣ್ಣ ಸಣ್ಣ ಜಾತಿಗಳು ಅಭಿವೃದ್ದಿಯಾಗಲು ನಾವು ಶ್ರಮಿಸಬೇಕಾದ ಅನಿವಾರ್ಯತೆ ಇದೆ ಎಂದು ಕೆ.ಎನ್.ರಾಜಣ್ಣ ನುಡಿದರು.
ಕಾರ್ಯಕ್ರಮದಲ್ಲಿ ಹರಿಹರದ ರಾಜನಹಳ್ಳಿ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಆಶೀರ್ವನ ನೀಡಿ, ಇದೊಂದು ಐತಿಹಾಸಿಕ ಹೋರಾಟವಾಗಿದ್ದು, ಜೂನ್ 9 ರಂದು ಆರಂಭವಾಗುವ ಪಾದಯಾತ್ರೆ ದಾವಣೆಗೆರೆ, ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರದ ಮೂಲಕ ಜೂನ್ 24 ಬೆಂಗಳೂರು ತಲುಪಿ, ವಿಧಾನಸೌಧಕ್ಕೆ ಮುತ್ತಿಗೆ ಹಾಕಲಿದ್ದಾರೆ. ಇದಕ್ಕೆ ಎಲ್ಲರ ಸಹಕಾರ ಬೇಕು ಎಂದು ಮನವಿ ಮಾಡಿದರು.
ವೇದಿಕೆಯಲ್ಲಿ ಜಿ.ಪಂ.ಸದಸ್ಯರಾದ ಶ್ರೀಮತಿ ಶಾಂತಲಾ ರಾಜಣ್ಣ, ರಾಮಾಂಜೀನಪ್ಪ, ಪಾಲಿಕೆ ಸದಸ್ಯರಾದ ಟಿ.ಜಿ.ಕೃಷ್ಣಪ್ಪ, ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕರಾದ ಲಕ್ಷ್ಮಿನಾರಾಯಣ, ಆರ್.ರಾಜೇಂದ್ರ, ರಾಜೇಂದ್ರನಾಯಕ್, ಟಿ.ಬಿ.ಮಲ್ಲೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.







