ಉಡುಪಿ: ಮಾರಾಟ ಸಂಸ್ಥೆಯ ವಿರುದ್ಧ ರಿಕ್ಷಾ ಚಾಲಕ-ಮಾಲಕರ ಧರಣಿ

ಉಡುಪಿ, ಮೇ 27: ಖರೀದಿಸಿದ ಒಂದು ವರ್ಷದೊಳಗೆ ಇಂಜಿನ್ ಸಮಸ್ಯೆ ಕಂಡು ಬಂದರೂ ಬದಲಿ ರಿಕ್ಷಾವನ್ನು ನೀಡದ ಮಾರಾಟ ಸಂಸ್ಥೆಯ ಕ್ರಮವನ್ನು ವಿರೋಧಿಸಿ ಕಲ್ಯಾಣಪುರ ಸಂತೆಕಟ್ಟೆ ಆಟೋ ರಿಕ್ಷಾ ಮಾಲಕರ ಮತ್ತು ಚಾಲಕ ಸಂಘದ ನೇತೃತ್ವದಲ್ಲಿ ರಿಕ್ಷಾ ಚಾಲಕರು ಸೋಮವಾರ ಉಡುಪಿ ಕರಾವಳಿ ಬೈಪಾಸ್‌ನಲ್ಲಿರುವ ಪವನ್ ಮೋಟಾರ್ಸ್ ಎದುರು ಧರಣಿ ನಡೆಸಿದರು.
ಅಬ್ದುಲ್ ಅಝೀಝ್ ಎಂಬವರು ಸಂಸ್ಥೆಯಿಂದ 2018ರ ಜು.4ರಂದು ಬಜಾಜ್ ಮ್ಯಾಕ್ಸಿಮಾ ಆಟೋರಿಕ್ಷಾವನ್ನು ಖರೀದಿಸಿದ್ದು, ತದನಂತರ ರಿಕ್ಷಾದಲ್ಲಿ ತಾಂತ್ರಿಕ ತೊಂದರೆ ಕಂಡುಬಂದಿತ್ತು. ದುರಸ್ತಿಯ ಸಂದರ್ಭ ಶೋರೂಂನವರು ಮೂರು ಬಾರಿ ರಿಕ್ಷಾದ ಇಂಜಿನ್ ಡೌನ್ ಮಾಡಿದ್ದರು. ಹೀಗೆ 30ಕ್ಕೂ ಅಧಿಕ ಬಾರಿ ರಿಕ್ಷಾ ರಿಪೇರಿಗೆ ಇಡಲಾಗಿತ್ತು. ಒಂದು ವರ್ಷ ವಾರಂಟಿ ಹೊಂದಿರುವ ವಾಹನದಲ್ಲಿ ಒಂದೇ ತಿಂಗಳಲ್ಲಿ ಇಂಜಿನ್ ಸಮಸ್ಯೆ ಕಂಡುಬಂದಿದೆ ಎಂದು ಸಂಘದ ಅಧ್ಯಕ್ಷ ಪ್ರಕಾಶ್ ಶೇರಿಗಾರ್ ಆರೋಪಿಸಿದರು.
ಈ ಸಮಸ್ಯೆ ವಾರಂಟಿ ಅವಧಿಯಲ್ಲಿ ಕಂಡುಬಂದರೂ ಕಂಪೆನಿಯಿಂದ ಯಾವುದೇ ಸ್ಪಂದನೆ ದೊರೆತಿಲ್ಲ. ಬದಲಿ ರಿಕ್ಷಾವನ್ನು ನೀಡಿಲ್ಲ. ದುರಸ್ತಿಯಲ್ಲಿ ರಿಯಾಯಿತಿಯನ್ನು ಕೂಡ ಒದಗಿಸಲಿಲ್ಲ. ರಿಕ್ಷಾದ ಸಾಲ ಮರುಪಾವತಿಗೆ ಬಾಕಿ ಇದ್ದು, ಸಾಲದ ಮೇಲಿನ ಬಡ್ಡಿ ಹೆಚ್ಚುತ್ತಿದೆ. ಆದುದರಿಂದ ಚಾಲಕ ಅಬ್ದುಲ್ ಅಝೀಝ್ ಅವರಿಗೆ ಬದಲಿಗೆ ರಿಕ್ಷಾ ನೀಡುವಂತೆ ಗೌರವಾಧ್ಯಕ್ಷ ಶೇಖರ್ ಪೂಜಾರಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಂಘದ ಕಾರ್ಯದರ್ಶಿ ಅಬ್ದುಲ್ ಅಝೀಝ್, ಕೋಶಾಧಿಕಾರಿ ದಿನೇಶ್ ಕವನ, ಜೊತೆ ಕಾರ್ಯದರ್ಶಿ ಕಿರಣ್, ಮಾಜಿ ಅಧ್ಯಕ್ಷ ರಾದ ಜಯರಾಂ ನೇಜಾರು, ರತ್ನಾಕರ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು.
ಅಬ್ದುಲ್ ಅಝೀಝ್ ಖರೀದಿಸಿದ ರಿಕ್ಷಾ ಎಂಟು ತಿಂಗಳಲ್ಲಿ 41460 ಕಿ.ಮೀ. ಓಡಿದೆ. ನಮ್ಮ ನಿಯಮ ಪ್ರಕಾರ ಒಂದು ವರ್ಷ ಅವಧಿ ಅಥವಾ 40 ಸಾವಿರ ಕಿ.ಮೀ. ಓಡಿದ ವಾಹನಗಳಿಗೆ ವಾರಂಟಿ ಕೊಡಲು ಅವಕಾಶ ಇಲ್ಲ. ಆದರೂ ಇವರ ವಾಹನವನ್ನು ದುರಸ್ತಿ ಮಾಡಿಕೊಟ್ಟಿದ್ದೇವೆ. ವಾಹನದಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಪವನ್ ಮೊಟಾರ್ಸ್ ಮಾಲಕ ಸುಭಾಷ್ ಚಂದ್ರ ಹೆಗ್ಡೆ ಸ್ಪಷ್ಟನೆ ನೀಡಿದ್ದಾರೆ.







