ಪ್ರಧಾನ ನ್ಯಾಯಾಧೀಶರಾಗಿ ಆಗಮಿಸಿದ ನಾಗೇಶ್‍ರಿಗೆ ಬೆಳ್ತಂಗಡಿ ವಕೀಲರ ಸಂಘದಿಂದ ಸ್ವಾಗತ

ಬೆಳ್ತಂಗಡಿ: ಬೆಳ್ತಂಗಡಿ ನ್ಯಾಯಾಲಯಕ್ಕೆ ಪ್ರಧಾನ ಹಿರಿಯ ಸಿವಿಲ್ ಮತ್ತು ಜೆಎಂಎಫ್‍ಸಿ ನ್ಯಾಯಾಧೀಶರಾಗಿ ಅಧಿಕಾರ ಸ್ವೀಕರಿಸಿದ ನಾಗೇಶ್ ಬಿ.ಕೆ.ಅವರಿಗೆ ಬೆಳ್ತಂಗಡಿ ವಕೀಲರ ಸಂಘದ ವತಿಯಿಂದ ಸ್ವಾಗತ ಕಾರ್ಯಕ್ರಮ ಸೋಮವಾರ ನ್ಯಾಯಾಲಯ ಸಭಾಭವನದಲ್ಲಿ ನಡೆಯಿತು.
ವಕೀಲರ ಸಂಘದಿಂದ ಗೌರವವನ್ನು ಸ್ವೀಕರಿಸಿದ ನ್ಯಾಯಾಧೀಶರಾದ ನಾಗೇಶ್ ಅವರು ಮಾತನಾಡಿ, ತಾನು ಹಿಂದೆ ಕರ್ತವ್ಯ ನಿರ್ವಹಿಸಿದ ನ್ಯಾಯಾಲಯದಲ್ಲಿ ಸುಮಾರು 5 ಸಾವಿರಕ್ಕೂ ಅಧಿಕ ಕ್ರಿಮಿನಲ್ ಪ್ರಕರಣಗಳಿದ್ದು, ಇಲ್ಲಿ ಕೇವಲ 750 ಪ್ರಕರಣಗಳು ಮಾತ್ರ ಬಾಕಿ ಇವೆ. ನ್ಯಾಯಾಲಯಗಳಲ್ಲಿ ವಕೀಲರು ಹಾಗೂ ಸಿಬಂದಿಯ ಪಾತ್ರ ಪ್ರಮುಖವಾಗಿದ್ದು, ನ್ಯಾಯಾಧೀಶರು ಸಾರಥಿಯ ಕೆಲಸ ಮಾಡಲಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸೇವಿಯರ್ ಪಾಲೇಲಿ ಮಾತನಾಡಿ, ಬೆಳ್ತಂಗಡಿಯ ಜನತೆಗೆ ಒಳ್ಳೆಯ ನ್ಯಾಯದಾನ ನೀಡುವ ನಿಟ್ಟಿನಲ್ಲಿ ಬೆಳ್ತಂಗಡಿಯಲ್ಲಿ ನ್ಯಾಯಾಧೀಶರು ಹಾಗೂ ವಕೀಲರು ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ. ಬೇರೆ ಬೇರೆ ಊರುಗಳಿಂದ ಇಲ್ಲಿಗೆ ಆಗಮಿಸುವ ನ್ಯಾಯಾಧೀಶರು ಸರಳತೆಯ ಮೂಲಕ ಎಲ್ಲರ ಪ್ರೀತಿಗಳಿಸಿದ್ದು, ನ್ಯಾಯಾಂಗ ವ್ಯವಸ್ಥೆಗೆ ಗೌರವವನ್ನು ತಂದಿದೆ ಎಂದರು.
ವೇದಿಕೆಯಲ್ಲಿ ಪ್ರಧಾನ ಸಿವಿಲ್ ಹಾಗೂ ಜೆಎಂಎಫ್‍ಸಿ ನ್ಯಾಯಾಧೀಶ ಕೆ.ಎಂ.ಆನಂದ್, ಹೆಚ್ಚುವರಿ ನ್ಯಾಯಾಧೀಶ ಸತೀಶ್, ಸಹಾಯಕ ಸರಕಾರಿ ಅಭಿಯೋಜಕ ಕಿರಣ್‍ಕುಮಾರ್ ಜಿ.ಕೆ. ಉಪಸ್ಥಿತರಿದ್ದರು. ಹಿರಿಯ ವಕೀಲರ ಸಂಘದ ಅಧ್ಯಕ್ಷ ಶಶಿಕಿರಣ್ ಜೈನ್ ಅಭಿಪ್ರಾಯ ವ್ಯಕ್ತಪಡಿಸಿದರು.
ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಮನೋಹರ್‍ಕುಮಾರ್ ಎ. ಸ್ವಾಗತಿಸಿದರು. ಉಪಾಧ್ಯಕ್ಷ ಶ್ರೀನಿವಾಸ ಗೌಡ ವಂದಿಸಿದರು. ಶೈಲೇಶ್ ಟೋಸರ್ ಕಾರ್ಯಕ್ರಮ ನಿರ್ವಹಿಸಿದರು.







