ಬಹುಭಾಷಾ ಜ್ಞಾನಿ ಡಾ.ಎನ್.ಟಿ.ಭಟ್‌ಗೆ ಸೇಡಿಯಾಪು ಪ್ರಶಸ್ತಿ

ಉಡುಪಿ, ಮೇ 27: ಅನುವಾದ ಸಾಹಿತ್ಯವನ್ನೊಳಗೊಂಡು ಭಾಷಾಕ್ಷೇತ್ರದಲ್ಲಿ ಹಲವು ದಶಕಗಳ ಕಾಲ ದುಡಿದಿರುವ ಜರ್ಮನ್ ಭಾಷಾ ತಜ್ಞ ಮತ್ತು ಬಹು ಭಾಷಾ ಜ್ಞಾನಿ ಡಾ.ನೀರ್ಕಜೆ ತಿರುಮಲೇಶ್ವರ ಭಟ್ ಅವರು 2019ನೇ ಸಾಲಿನ ಸೇಡಿಯಾಪು ಕೃಷ್ಣ ಭಟ್ಟ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಕನ್ನಡ ಭಾಷೆ, ಸಾಹಿತ್ಯ, ವ್ಯಾಕರಣ, ಭಾಷಾಶಾಸ್ತ್ರ, ಕಥನ ಕಾವ್ಯ ಮತ್ತು ಸಂಶೋಧನ ಕ್ಷೇತ್ರಗಳಲ್ಲಿ ಮಹತ್ವದ ಕೊಡುಗೆ ನೀಡಿರುವ ಘನ ವಿದ್ವಾಂಸರಾದ ಸೇಡಿಯಾಪು ಕೃಷ್ಣ ಭಟ್ಟರ ನೆನಪಿನಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ ಎಂದು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಸಂಯೋಜಕ ಪ್ರೊ. ವರದೇಶ ಹಿರೇಗಂಗೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಶಸ್ತಿಯು 10,000 ರೂ. ನಗದು ಹಾಗೂ ಪ್ರಶಸ್ತಿ ಫಲಕವನ್ನೊಳಗೊಂಡಿರುತ್ತದೆ. ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಜೂ.8ರಂದು ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ.
ಎನ್.ಟಿ ಭಟ್ಟರೆಂದೇ ಪ್ರಸಿದ್ಧಿಪಡೆದಿರುವ ಡಾ.ನೀರ್ಕಜೆ ತಿರುಮಲೇಶ್ವರ ಭಟ್ಟರು ದ.ಕ. ಜಿಲ್ಲೆಯ ಬಂಟ್ವಾಳ ತಾಲೂಕಿನ ಕೇಪುಗ್ರಾಮದ ನೀರ್ಕಜೆಯವರು. ತಮ್ಮ ಹೈಸ್ಕೂಲ್ ವಿದ್ಯಾಭ್ಯಾಸವನ್ನು ವಿಟ್ಲದಲ್ಲಿ ಮುಗಿಸಿ, ಪದವಿಯನ್ನು ಎಂಜಿಎಂ ಕಾಲೇಜು, ಎಂ.ಎ.(ಇಂಗ್ಲಿಷ್) ಆಲಿಘರ್ ಮುಸ್ಲಿಂ ವಿವಿ ಹಾಗೂ ಎಂ.ಎ. (ಜರ್ಮನ್) ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ, ಹೈನ್ ರಿಶ್‌ಬೊಲ್ ಅವರ ಕೃತಿಗಳಲ್ಲಿ ‘ಗಾಂಧೀ ತತ್ವ’ ಎಂಬ ವಿಷಯದಲ್ಲಿ ಪಿಎಚ್‌ಡಿ ಪದವಿಯನ್ನು ಧಾರವಾಡದ ಕರ್ನಾಟಕ ವಿವಿಯಿಂದ ಪಡೆದಿದ್ದಾರೆ.
ಡಾ.ಭಟ್, ಎಂ.ಜಿ.ಎಂ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ, ವಿಭಾಗ ಮುಖ್ಯಸ್ಥರಾಗಿ, ಜರ್ಮನ್ ಭಾಷಾ ಬೋಧಕರಾಗಿ, ಅನುವಾದಕರಾಗಿ, ದಾಖಲಾತಿ ತಂತ್ರಜ್ಞರಾಗಿ, ವಿಮರ್ಶಕರಾಗಿ ಹಾಗೂ ಪತ್ರಿಕೆಗಳ ಯೋಜನೆ ಮತ್ತು ಸಂಪಾದಕರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಅಲ್ಲದೇ 2000-2003ರಲ್ಲಿ ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರದ ನಿರ್ದೇಶಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ.
ಗೋವಿಂದ ಪೈ, ದಿ ಪಾಥ್ ಆಫ್ ಗೋಲ್ಡ್, ಕು.ಶಿ.ಹರಿದಾಸ ಭಟ್ಟ, ದೊರಕಿದ ದಾರಿ (ಆತ್ಮಕಥನ,) ಶಾಸ್ತ್ರ-ಪ್ರಯೋಗ ಇವರ ಸ್ವತಂತ್ರ ಕೃತಿಗಳು. ಕನ್ನಡದಿಂದ ಜರ್ಮನಿಗೆ, ಇಂಗ್ಲಿಷಿನಿಂದ ಕನ್ನಡಕ್ಕೆ, ಕನ್ನಡದಿಂದ ಇಂಗ್ಲಿಷಿಗೆ ಹಲವಾರು ಗ್ರಂಥಗಳು ಅನುವಾದಿಸಿದ್ದಾರೆ.
ಮಾಸ್ತಿಯವರ ಸುಬ್ಬಣ್ಣ (ಕನ್ನಡದಿಂದ ಜರ್ಮನಿಗೆ), ಕಾಡ್ಯನಾಟ, ಬದುಕಲು ಕಲಿಯಿರಿ, ಮಂಟೇಸ್ವಾಮಿ ಮತ್ತು ಜುಂಜಪ್ಪಜಾನಪದ ಮಹಾಕಾವ್ಯಗಳು (ಕನ್ನಡದಿಂದ ಇಂಗ್ಲಿಷಿಗೆ), ಒಡೆಯರಲ್ಲ ಸೇವಕರು (ಇಂಗ್ಲಿಷಿನಿಂದ ಕನ್ನಡ) ಅವರ ಅನುವಾದ ಕೃತಿಗಳಲ್ಲಿ ಮುಖ್ಯವಾದವು.
ಇವರಿಗೆ ಜರ್ಮನ್ ರಾಷ್ಟ್ರಪತಿ ಅವರಿಂದ ಆರ್ಡರ್ ಆಫ್ ಮೆರಿಟ್ ಪುರಸ್ಕಾರ, ಎಂ.ಜಿ.ಎಂ ಕಾಲೇಜಿನಲ್ಲಿ ಹುಟ್ಟುಹಬ್ಬದ ಸಂಭ್ರಮ ಅಬಿನಂದನ ಗ್ರಂಥ ಸಮರ್ಪಣೆ ಹಾಗೂ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದಿಂದ ಅಭಿನಂದನಾ ಕಾರ್ಯಕ್ರಮಗಳು ಜರಗಿವೆ.







