ಹೆಚ್ಚು ಬಾರಿ ರಕ್ತದಾನ ಮಾಡಿದ ರಕ್ತದಾನಿಗಳಿಗೆ ಸನ್ಮಾನ
ಉಡುಪಿ, ಮೇ 27: ಮನುಷ್ಯನಲ್ಲಿ ‘ಎ’, ‘ಬಿ’, ‘ಒ’ ರಕ್ತದ ಗುಂಪನ್ನು ಕಂಡುಹಿಡಿದ ಡಾ.ಕಾರ್ಲ್ಲ್ಯಾಂಡ್ ಸ್ಟೇನಿಯರ್ ಅವರ ಹುಟ್ಟುಹಬ್ಬವನ್ನು ವಿಶ್ವದಾದ್ಯಂತ ಪ್ರತಿ ವರ್ಷ ಜೂನ್ 14ರಂದು ವಿಶ್ವ ರಕ್ತದಾನಿಗಳ ದಿನಾಚರಣೆಯಾಗಿ ಆಚರಿಸಲಾಗುತ್ತಿದೆ. ಭಾರತೀಯ ರೆಡ್ಕ್ರಾಸ್ ಸಂಸ್ಥೆ ಈ ಬಾರಿಯೂ ರಕ್ತದಾನಿಗಳ ದಿನವನ್ನು ಆಚರಿಸಲಿದೆ.
ಯಾವುದೇ ಪ್ರತಿಫಲವನ್ನು ಅಪೇಕ್ಷಿಸದೇ ಇನ್ನೊಬ್ಬರ ಅಮೂಲ್ಯವಾದ ಜೀವವನ್ನು ಉಳಿಸಬೇಕೆಂಬ ಉದ್ದೇಶವನ್ನು ಇಟ್ಟುಕೊಂಡು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವ ರಕ್ತದಾನಿಗಳಿಗೆ ಗೌರವ ಮತ್ತು ಹೃತ್ಪೂರ್ವಕ ವಂದನೆಗಳನ್ನು ಸಲ್ಲಿಸುವುದೇ ವಿಶ್ವ ರಕ್ತದಾನಿಗಳ ದಿನಾಚರಣೆಯ ಉದ್ದೇಶ.
ಈ ವರ್ಷವೂ ಜೂ.14ರಂದು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿರುವ ರಕ್ತದಾನಿಯನ್ನು ಗುರುತಿಸಿ ಗೌರವಿಸಲು ಹಾಗೂ ಪ್ರೋತ್ಸಾಹಿಸಲು ನಿರ್ಧರಿ ಸಲಾಗಿದ್ದು, 25ಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿದ ದಾನಿಗಳನ್ನು ಗೌರವಿಸಲಾಗುವುದು. ಆದ್ದರಿಂದ ಕನಿಷ್ಠ 25 ಬಾರಿಗೂ ಮೇಲ್ಪಟ್ಟು ರಕ್ತದಾನ ಮಾಡಿರುವ ದಾನಿಗಳು ರಕ್ತದಾನ ಮಾಡಿರುವ ಬಗ್ಗೆ ಸಂಬಂಧಪಟ್ಟ ದಾಖಲೆಗಳನ್ನು ಕಡ್ಡಾಯವಾಗಿ ಲಗತ್ತಿಸಿ, ವಿಳಾಸ ಹಾಗೂ ಮೊಬೈಲ್ ಸಂಖ್ಯೆಯೊಂದಿಗೆ ಭಾರತೀಯ ರೆಡ್ಕ್ರಾಸ್ ಸಂಸ್ಥೆ, ಉಡುಪಿ ಜಿಲ್ಲಾ ಘಟಕ, ರೆಡ್ಕ್ರಾಸ್ ಭವನ, ಅಜ್ಜರಕಾಡು, ಉಡುಪಿ ಈ ವಿಳಾಸಕ್ಕೆ ಜೂನ್ 8ರ ಒಳಗೆ ಕಳುಹಿಸಬೇಕು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 0820-2532222ನ್ನು ಸಂಪರ್ಕಿಸುವಂತೆ ಭಾರತೀಯ ರೆಡ್ಕ್ರಾಸ್ ಸಂಸ್ಥೆ ಉುಪಿ ಜಿಲ್ಲಾ ಘಟಕದ ಪ್ರಕಟಣೆ ತಿಳಿಸಿದೆ.