ಅಪಾಯದ ಅಂಚಿನಲ್ಲಿ ಮಡಿವಾಳ ಕೆರೆಯ ಜಲಚರ-ಪಕ್ಷಿ ಸಂಕುಲ
ಬೆಂಗಳೂರು, ಮೇ 27: ಮೂನ್ನೂರು ವರ್ಷಗಳ ಇತಿಹಾಸವುಳ್ಳ ಮಡಿವಾಳ ಕೆರೆಯಲ್ಲಿ ವಿವಿಧ ಜೀವವೈವಿಧ್ಯ ನೆಲೆಯೂರಿದ್ದು, ಕೆರೆಯಲ್ಲಿನ ತ್ಯಾಜ್ಯ ನೀರು ಸಂಸ್ಕರಣಾ ಘಟಕ ನಿರ್ಮಾಣ ಮತ್ತು ಹೂಳೆತ್ತುವ ಕೆಲಸವೇ ಆಗದೆ, ಕೆರೆಯು ಸಂಪೂರ್ಣವಾಗಿ ಮಲಿನಗೊಂಡು ಜಲಚರಗಳು ಹಾಗೂ ಪಕ್ಷಿ ಸಂಕುಲದ ವಿನಾಶಕ್ಕೆ ಕಾರಣವಾಗುತ್ತಿದೆ.
ಕಾಂಕ್ರಿಟ್ ಕಾಡಿನ ಮಧ್ಯೆ ಇರುವ ಮಡಿವಾಳ ಕೆರೆಯಲ್ಲಿ ಸಸ್ಯ, ಪ್ರಾಣಿಸಂಕುಲ ಮೈದಳೆವಂತೆ ಮಾಡಲು, ವಾಯುಮಾಲಿನ್ಯ ತಗ್ಗಿಸಲು ಮತ್ತು ಅಂತರ್ಜಲ ವೃದ್ಧಿಸುವ ಉದ್ದೇಶದಿಂದ ಕರ್ನಾಟಕ ಸರೋವರ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರವು (ಕೆಎಲ್‌ಸಿಡಿಎ) ಕೆರೆ ಅಂಗಳದಲ್ಲಿ 24.72 ಕೋಟಿ ರೂ. ವೆಚ್ಚದಲ್ಲಿ ಜೀವವೈವಿಧ್ಯ ಉದ್ಯಾನ ನಿರ್ಮಾಣ ಮತ್ತು ಪುನರುಜ್ಜೀವನ ಕಾಮಗಾರಿ ಕೈಗೊಂಡಿತು. ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು 2016ರ ಸೆ.12ರಂದು ಇದಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು.
ಜ್ಞಾನ ಆಯೋಗದ ಸಲಹೆಯಂತೆ ಜೀವವೈವಿಧ್ಯ ಉದ್ಯಾನ, ಜಲಾನಯನ ಪ್ರದೇಶ ವಿಸ್ತರಣೆ, 5 ಕಿ.ಮೀ. ಉದ್ದದ ವಿಹಾರ ಪಥ, ಪಕ್ಷಿಲೋಕ, ಆರ್ಕಿಡ್ ಉದ್ಯಾನ, ಬಯಲು ರಂಗಮಂದಿರ, ಪಾಲಿಹೌಸ್‌ಗಳನ್ನು ನಿರ್ಮಿಸಲಾಗಿದೆ. ಸ್ಥಳೀಯ ಪ್ರಭೇದದ ಮರಗಳು ಮತ್ತು ಜವುಗು ಪ್ರದೇಶದ ಸಸ್ಯಗಳನ್ನು ಬೆಳೆಸಲಾಗಿದೆ. ಆದರೆ, ಜೀವವೈವಿಧ್ಯ ಉದ್ಯಾನ ನಿರ್ಮಾಣದೊಂದಿಗೆ ಕೈಗೊಳ್ಳಬೇಕಾದ ಹಲವು ಅಭಿವೃದ್ಧಿ ಕೆಲಸಗಳು ಆಗಿಲ್ಲ. ಹೀಗಾಗಿ 272 ಎಕರೆ ವಿಸ್ತೀರ್ಣ ಹೊಂದಿರುವ ಕೆರೆಯು ಪರಿಪೂರ್ಣ ಅಭಿವೃದ್ಧಿ ಕಂಡಿಲ್ಲ.
ಕೆಎಲ್‌ಸಿಡಿಎ ನಿಷ್ಕ್ರಿಯಗೊಳಿಸಿದ ಬಳಿಕ ಮಡಿವಾಳ ಕೆರೆ ಅಭಿವೃದ್ಧಿಗೆ ಎಳ್ಳುನೀರು ಬಿಟ್ಟಂತಾಗಿದೆ. ಹೂಳು ತೆಗೆಸದ ಪರಿಣಾಮ ಕೆರೆ ಸುತ್ತಲೂ ಕಳೆ ಸಸ್ಯಗಳು ಬೆಳೆದು ನಿಂತಿವೆ. ಎರಡು ತಿಂಗಳ ಹಿಂದೆ ಕೆರೆಯ ಬಹುತೇಕ ಪ್ರದೇಶವು ನೀರಿಲ್ಲದೆ ಬತ್ತಿ ಹೋಗಿತ್ತು. ಹೀಗಾಗಿ ದೋಣಿ ವಿಹಾರವನ್ನು ಸ್ಥಗಿತಗೊಳಿಸಲಾಗಿತ್ತು. ಇತ್ತೀಚೆಗೆ ಸುರಿದ ಮಳೆಯಿಂದ ಕೆರೆಗೆ ಮತ್ತೆ ನೀರು ಬಂದಿದ್ದು, ದೋಣಿ ವಿಹಾರವನ್ನು ಆರಂಭಿಸಲಾಗಿದೆ. ವರ್ಷಗಳ ಹಿಂದೆ ನಿರ್ಮಿಸಿರುವ ಶೌಚಾಲಯಕ್ಕೆ ವಿದ್ಯುತ್ ಮತ್ತು ನೀರಿನ ಸಂಪರ್ಕ ಕಲ್ಪಿಸಿಲ್ಲ. ಹಾಗಾಗಿ ನೂತನ ಶೌಚಾಲಯವು ಬಳಕೆಗೆ ಮುಕ್ತವಾಗಿಲ್ಲ.
ಜಲಚರಗಳ ಮಾರಣಹೋಮ: ಕೆರೆಯ ಮಡಿಲಿನಲ್ಲಿ ಬಣ್ಣ ಬಣ್ಣದ ಹಕ್ಕಿಗಳು, ಜಲಚರಗಳಿವೆ. ಬಾನಾಡಿಗಳನ್ನು ನೋಡಲು ನಿತ್ಯ ನೂರಾರು ಮಂದಿ ಬರುತ್ತಾರೆ. ಆದರೆ, ಕೆರೆಯಲ್ಲಿ ಸೇರುವ ಮಲಿನ ನೀರಿನ ಪ್ರಮಾಣ ಹೆಚ್ಚುತ್ತಲೇ ಇದೆ. ಕೆರೆ ಮಲಿನಗೊಂಡರೆ ವಲಸೆ ಪಕ್ಷಿಗಳು ಬರುವುದಿಲ್ಲ. ಕೆರೆಯ ನೀರು ವಿಷವಾಗಿ ಪರಿವರ್ತನೆಗೊಳ್ಳುತ್ತಿರುವುದರಿಂದ ಆಗಾಗ್ಗೆ ಮೀನು, ಶಂಖದ ಹುಳಗಳ ಮಾರಣಹೋಮ ನಡೆಯುತ್ತಿದೆ. ಆದರೂ ಕೆರೆಗೆ ಕೊಳಚೆ ನೀರು ಸೇರುವುದನ್ನು ತಡೆಯುವ ಪ್ರಯತ್ನ ಈವರೆಗೆ ನಡೆದಿಲ್ಲ.
ಬಿಟಿಎಂ ಲೇಔಟ್, ಬಿಳೇಕಹಳ್ಳಿ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಿಂದ ಹರಿದು ಬರುವ ಒಳಚರಂಡಿ ನೀರು ನೇರವಾಗಿ ಕೆರೆಯ ಒಡಲು ಸೇರುತ್ತಿದೆ. ಸಂಸ್ಕರಣಾ ಘಟಕ ನಿರ್ಮಾಣ ಕಾಮಗಾರಿಯನ್ನು ಆದಷ್ಟು ಶೀಘ್ರವಾಗಿ ಪೂರ್ಣಗೊಳಿಸುವಂತೆ ಹಲವು ಬಾರಿ ಜಲಮಂಡಳಿಗೆ ಪತ್ರ ಬರೆದಿದ್ದೇವೆ. ಆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.







