ಸುಂಟಿಕೊಪ್ಪ: ಕಾಲೇಜು ವಿದ್ಯಾರ್ಥಿನಿ ಕೆರೆಗೆ ಹಾರಿ ಆತ್ಮಹತ್ಯೆ

ಸುಂಟಿಕೊಪ್ಪ, ಮೇ 27: ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಲೇಜು ವಿದ್ಯಾರ್ಥಿನಿಯೊರ್ವಳು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.
ನಾಕೂರು ಶಿರಂಗಾಲ ಗ್ರಾಮ ಪಂಚಾಯತ್ ವ್ಯಾಪ್ತಿಯ ದಿವಂಗತ ಜಗದೀಶ್ ಎಂಬವರ ಪುತ್ರಿ ಮನ್ವೀತ (17) ಎಂಬಾಕೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಯುವತಿ. ಈಕೆ ಇಲ್ಲಿಗೆ ಸಮೀಪದ ಅನುದಾನಿತ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಕಳೆದ ವಾರ ಕಾಲೇಜು ಪುನಃರಾಂಭಗೊಂಡಿದ್ದು ಎಂದಿನಂತೆ ಶನಿವಾರ ತರಗತಿ ಮುಗಿಸಿ ಬಂದಿದ್ದಾಳೆ. ಈಕೆ ಯುವಕನೋರ್ವನೊಂದಿಗಿನ ಪ್ರೇಮ ವೈಫಲ್ಯದಿಂದ ನೊಂದುಕೊಂಡಿದ್ದಳು ಎನ್ನಲಾಗಿದೆ.
ಮನ್ವಿತ ಇಂದು ಬೆಳಿಗ್ಗೆ 11.30 ರ ವೇಳೆ ಮನೆಯಿಂದ ಇದ್ದಕ್ಕಿದಂತೆ ಕಾಣೆಯಾಗಿದ್ದಳು. ಬಳಿಕ ಮನೆಯಿಂದ ಅನತಿ ದೂರದಲ್ಲಿರುವ ಪನ್ಯ ತೋಟದ ಎಸ್.ಬಿ.ಗಣೇಶ್ ಅವರ ಕಾಫಿ ತೋಟದ ಕೆರೆಯಲ್ಲಿ ಆಕೆಯ ಮೃತದೇಹ ಪತ್ತೆಯಾಗಿದೆ. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಡೆತ್‍ನೋಟು ಬರೆದಿಟ್ಟಿದ್ದು, ತನ್ನ ಸಾವಿಗೆ ಕಾರಣ ಎಂದು ಆರೋಪಿಸಿ ಯುವಕನೋರ್ವನ ಹೆಸರನ್ನು ಬರೆದಿಟ್ಟಿದ್ದಾಳೆ ಎಂದು ಹೇಳಲಾಗಿದೆ.
ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮನ್ವಿತ ಆತ್ಮಹತ್ಯೆಗೆ ಕಾರಣವಾಗಿದ್ದಾನೆ ಎನ್ನಲಾದ 7ನೇ ಹೊಸಕೋಟೆಯ ಯುವಕನೋರ್ವನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಯಿತು.







