ಕಾಪು: ಸಮುದ್ರ ತೀರದಲ್ಲಿ ಕಪ್ಪು ಬಣ್ಣದ ಜಿಡ್ಡು

ಕಾಪು: ಕಾಪು ಪರಿಸರದ ಸಮುದ್ರ ತೀರದಲ್ಲಿ ತೇವಾಂಶ ಮಿಶ್ರಿತ ಕಪ್ಪು ಬಣ್ಣದ ತೈಲ ಜಿಡ್ಡು ಕಾಣಿಸಿಕೊಂಡಿದ್ದು, ಸ್ಥಳೀಯ ನಿವಾಸಿಗಳು ಈ ಬಗ್ಗೆ ಆತಂಕಿತರಾಗಿದ್ದಾರೆ.
ರವಿವಾರ ಸಂಜೆಯಿಂದ ಮೂಳೂರು, ಕಾಪು, ಹೆಜಮಾಡಿ, ಪಡುಬಿದ್ರಿ, ಎರ್ಮಾಳು ತೆಂಕ, ಬಡಾ, ಪೊಲಿಪು, ಕೈಪುಂಜಾಲು, ಮಟ್ಟು, ಉದ್ಯಾವರಗಳಲ್ಲಿ ಈ ತೈಲ ಜಿಡ್ಡು ಅಪ್ಪಳಿಸುತ್ತಿದೆ. ಸಮುದ್ರ ತೀರ ಸೇರಿದ ಈ ಜಿಡ್ಡು ಬಿಸಿಲಿಗೆ ಕರಗುತ್ತಿರುವುದರಿಂದ ಪರಿಸರವೆಲ್ಲ ಎಣ್ಣೆಯ ವಾಸನೆ ಬೀರುತ್ತಿದೆ. ಮೀನುಗಾರಿಕಾ ಋತು ಪೂರ್ಣಗೊಳಿಸಿದ ಬಳಿಕ ಅಂದರೆ ಮೇ, ಜೂನ್ ತಿಂಗಳಿನಲ್ಲಿ ಬೃಹತ್ ಗಾತ್ರದ ದೋಣಿಗಳಲ್ಲಿನ ಬಳಸಿದ ತೈಲವನ್ನು ಎಲ್ಲೆಂದರಲ್ಲಿ ವಿಸರ್ಜಿಸುತ್ತಿರುವುದರಿಂದ ಈ ರೀತಿಯಾಗುತ್ತಿದೆ.
ತ್ಯಾಜ್ಯ ಅಪ್ಪಳಿಸಿದ ಎರ್ಮಾಳು ಹಾಗೂ ಮೂಳೂರು ಕಡಲ ಕಿನಾರೆ ಪ್ರದೇಶಗಳಿಗೆ ಸೋಮವಾರ ಸಂಜೆ ವೇಳೆ ಕಾಪು ತಹಶೀಲ್ದಾರ್ ಹಾಗೂ ಪರಿಸರ ಇಲಾಖೆಯ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಉಡುಪಿ ಜಿಲ್ಲೆಯಲ್ಲಿ ಇಂತಹ ಪ್ರಕರಣ ಪ್ರಥಮವಾಗಿ ಬೆಳಕಿಗೆ ಬಂದಿದೆ. ಕಚ್ಚಾತೈಲ ವಿಲೇವಾರಿ ಅಥವಾ ಬೋಟ್‍ಗಳಲ್ಲಿನ ಆಯಿಲ್ ವಿಲೇಯಿಂದ ಈ ರೀತಿಯಾಗಿರಬಹುದು. ಇಲ್ಲಿನ ತ್ಯಾಜ್ಯ ಹಾಗೂ ನೀರಿನ ಮಾದರಿಯನ್ನು ಸಂಗ್ರಹಿಸಲಾಗಿದ್ದು, ಮಂಗಳೂರಿನಲ್ಲಿರುವ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಲ್ಯಾಬ್‍ನಲ್ಲಿ ಪರೀಕ್ಷೆಗೆ ಕಳುಹಿಸಲಾಗುವುದು. ವರದಿ ಬಂದ ಬಳಿಕವಷ್ಟೇ ಸತ್ಯಾಸತ್ಯತೆ ತಿಳಿಯಲಿದೆ ಎಂದು ಪರಿಸರ ಇಲಾಖೆಯ ಸಹಾಯಕ ಅಧಿಕಾರಿ ಪ್ರಮೀಳಾ ಹೇಳಿದರು.
ಕಡಲ ಕಿನಾರೆಯಲ್ಲಿ ಹರಡಿರುವ ತ್ಯಾಜ್ಯವನ್ನು ಮಲ್ಪೆಯಲ್ಲಿರುವ ಬೀಚ್ ಕ್ಲೀನಿಂಗ್ ಯಂತ್ರ ಇಲ್ಲವೇ ಗ್ರಾಮ ಪಂಚಾಯಿತಿ ಮೂಲಕ ಸ್ವಚ್ಚಗೊಳಿಸಬೇಕಿದೆ ಎಂದು ತಹಶೀಲ್ದಾರ್ ರಶ್ಮಿ ತಿಳಿಸಿದರು.
ಕಂದಾಯ ಪರಿವೀಕ್ಷಕ ರವಿಶಂಕರ್, ಗ್ರಾಮ ಕರಣಿಕ ಗಣೇಶ್ ಉಪಸ್ಥಿತರಿದ್ದರು.








