2ನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‍ಸಿ ನ್ಯಾಯಾಲಯದ ಉದ್ಘಾಟನಾ ಸಮಾರಂಭ
ವಕೀಲರು ತಮ್ಮ ಹೊಣೆಗಾರಿಯನ್ನು ಅರ್ಥ ಮಾಡಿಕೊಳ್ಳಬೇಕು: ನ್ಯಾ. ರುಡಾಲ್ಫ್ ಪಿರೇರಾ

ಪುತ್ತೂರು: ನ್ಯಾಯದಾನ ಒಂದು ಪರಮ ಪವಿತ್ರ ಕಾರ್ಯವಾಗಿದ್ದು, ವಕೀಲರು ಮತ್ತು ನ್ಯಾಯಾಧೀಶರೂ ಸೇರಿದಂತೆ ಇಡೀ ನ್ಯಾಯಾಂಗ ವ್ಯವಸ್ಥೆ ಪರಸ್ಪರ ಸಹಕಾರದಿಂದ ಕೆಲಸ ಮಾಡಿದರೆ ಮಾತ್ರ ಅತ್ಯುತ್ತಮ ರೀತಿಯಲ್ಲಿ ಮತ್ತು ತ್ವರಿತವಾಗಿ ನ್ಯಾಯದಾನ ಮಾಡಲು ಸಾಧ್ಯ. ನಮ್ಮ ದೇಶದಲ್ಲಿ ನ್ಯಾಯಾಂಗ ವ್ಯವಸ್ಥೆಗೆ ಅಪಾರ ಗೌರವವಿದ್ದು, ಕಕ್ಷಿದಾರರ ಹತ್ತಾರು ಸಮಸ್ಯೆಗಳಿಗೆ ಉತ್ತರಿಸುವ ಹೊಣೆಗಾರಿಕೆಯೂ ನಮ್ಮ ಮೇಲಿರುವುದರಿಂದ ನಾವು ಆ ದೊಡ್ಡ ಮಟ್ಟದ ಹೊಣೆಗಾರಿಕೆಯನ್ನು ಅರ್ಥ ಮಾಡಿಕೊಳ್ಳಬೇಕಿದೆ ಎಂದು ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರುಡಾಲ್ಫ್ ಪಿರೇರಾ ಹೇಳಿದರು.
ಅವರು ಪುತ್ತೂರಿನ ನ್ಯಾಯಲಯ ಸಂಕೀರ್ಣದ ಪರಾಶರ ಸಭಾಂಗಣದಲ್ಲಿ ಸೋಮವಾರ ನಡೆದ ಪುತ್ತೂರಿಗೆ ನೂತನವಾಗಿ ಮಂಜೂರಾದ 2ನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‍ಸಿ ನ್ಯಾಯಾಲಯದ ಉದ್ಘಾಟನಾ ಸಮಾರಂಭ ಮತ್ತು ನೂತನ ನ್ಯಾಯಾಧೀಶರ ಸ್ವಾಗತ ಕಾರ್ಯಕ್ರಮದಲ್ಲಿ ಮಾತನಾಡಿದರು.
ನ್ಯಾಯಾಂಗವು ನಿರಂತರ ಕಲಿಕಾ ಕೇಂದ್ರವಾಗಿದ್ದು, ಹೊಸ ಹೊಸ ಪ್ರಕರಣಗಳು ಬರುತ್ತಲೇ ಇರುವುದರಿಂದ ವಕೀಲರು ಮತ್ತು ನ್ಯಾಯಾಧೀಶರು ಹೊಸ ಹೊಸ ವಿಚಾರಗಳನ್ನು ಕಲಿಯುತ್ತ ಹೋಗಬೇಕಾಗುತ್ತದೆ ಎಂದು ಅವರು ತಿಳಿಸಿದರು.
ಪುತ್ತೂರಿನ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಮಂಜುನಾಥ್ ಅವರು ಮಾತನಾಡಿ, ಪುತ್ತೂರಿನಲ್ಲಿ ಕಳೆದ ಎರಡು ವರ್ಷಗಳಿಂದ ನಾನು ಕರ್ತವ್ಯ ನಿರ್ವಹಿಸುತ್ತಿದ್ದೇನೆ. ನ್ಯಾಯಾಂಗದ ಘನತೆಗೆ ತಕ್ಕುದಲ್ಲದ ಯಾವುದೇ ಘಟನೆ ಇಲ್ಲಿ ನಡೆದಿಲ್ಲ. ಇಲ್ಲಿನ ಜನ ನ್ಯಾಯಾಂಗಕ್ಕೆ ಗೌರವ ನೀಡುತ್ತಾರೆ ಎಂಬುದನ್ನು ಮನಗಂಡಿದ್ದೇನೆ. ನ್ಯಾಯ ವಿತರಣೆ ತ್ವರಿತವಾಗಿ ನಡೆಯುವಲ್ಲಿ ಈಗ ಆರಂಭಗೊಂಡಿರುವ ಹೊಸ ನ್ಯಾಯಾಲಯ ಸಹಕಾರಿಯಾಗಲಿದೆ ಎಂದರು.
ಪುತ್ತೂರಿಗೆ ನೂತನವಾಗಿ ಆಗಮಿಸಿದ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರುಡಾಲ್ಫ್ ಪಿರೇರಾ ಹಾಗೂ 2ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ವೆಂಕಟೇಶ್ ಎನ್. ಅವರನ್ನು ಪುತ್ತೂರು ವಕೀಲರ ಸಂಘದ ವತಿಯಿಂದ ಅಭಿನಂದಿಸಲಾಯಿತು.
ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶೆ ಲತಾದೇವಿ ಜಿ.ಎ, ಪ್ರಧಾನ ಸಿವಿಲ್ ನ್ಯಾಯಾಧೀಶ ಪ್ರಕಾಶ್ ಪಿ.ಎಂ, ಒಂದನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಕಿಶನ್ ಬಿ. ಮಡಲಗಿ, 2ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ವೆಂಕಟೇಶ್ ಎನ್, ಪುತ್ತೂರು ವಕೀಲರ ಸಂಘದ ಉಪಾಧ್ಯಕ್ಷ ಸುರೇಶ್ ರೈ ಪಡ್ಡಂಬೈಲು, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎನ್.ಎಸ್. ಮಂಜುನಾಥ್, ಕೋಶಾಧಿಕಾರಿ ದಿವ್ಯರಾಜ್ ಹೆಗ್ಡೆ, ಜತೆ ಕಾರ್ಯದರ್ಶಿ ಮಮತಾ ಸುವರ್ಣ ಉಪಸ್ಥಿತರಿದ್ದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಮನೋಹರ ಕೆ.ವಿ. ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೀತಿಲಕ್ಷ್ಮೀ ಪ್ರಾರ್ಥಿಸಿದರು.ವಕೀಲರ ಸಂಘದ ಮಾಜಿ ಅಧ್ಯಕ್ಷ ಭಾಸ್ಕರ ಗೌಡ ಕೋಡಿಂಬಾಳ ಕಾರ್ಯಕ್ರಮ ನಿರೂಪಿಸಿದರು.







