ಗ್ಯಾಸ್ ಸ್ಟೇಷನ್‌ಗೆ ಬಿಬಿಎಂಪಿ ಲೈಸೆನ್ಸ್ ಕಡ್ಡಾಯ: ಹೈಕೋರ್ಟ್ ಆದೇಶ

ಬೆಂಗಳೂರು, ಮೇ 27: ಬಿಬಿಎಂಪಿ ವ್ಯಾಪ್ತಿಯಲ್ಲಿ ಗ್ಯಾಸ್ ಸ್ಟೇಷನ್(ಇಂಧನ ಮಾರಾಟ ಕೇಂದ್ರ) ಆರಂಭಿಸಲು ಬಿಬಿಎಂಪಿಯಿಂದ ಲೈಸೆನ್ಸ್ ಪಡೆಯುವುದು ಕಡ್ಡಾಯ ಎಂದು ಹೈಕೋರ್ಟ್ ಆದೇಶಿಸಿದೆ. ಈ ಕುರಿತು ಸಿಪಾನಿ ಎನರ್ಜಿ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಪೂರ್ಣಗೊಳಿಸಿ ಆದೇಶ ಕಾಯ್ದಿರಿಸಿದ್ದ ನ್ಯಾಯಮೂರ್ತಿ ಎಸ್.ಸುನೀಲ್ ದತ್ತ ಯಾದವ್ ಅವರಿದ್ದ ನ್ಯಾಯಪೀಠ, ಸೋಮವಾರ ಗ್ಯಾಸ್ ಸ್ಟೇಷನ್ ಆರಂಭಿಸುವ ಮೊದಲು ಬಿಬಿಎಂಪಿಯಿಂದ ಕಡ್ಡಾಯವಾಗಿ ಲೈಸೆನ್ಸ್ ಪಡೆಯಲೆಬೇಕೆಂದು ಆದೇಶದಲ್ಲಿ ತಿಳಿಸಿ, ಅರ್ಜಿಯನ್ನು ಇತ್ಯರ್ಥಗೊಳಿಸಿದೆ.
ಪೆಟ್ರೋಲಿಯಂ ಟ್ರೇಡ್ ನಿಯಮಗಳ ಪ್ರಕಾರ ನಗರದಲ್ಲಿ ಗ್ಯಾಸ್ ಸ್ಟೇಷನ್ ಆರಂಭಿಸಲು ಬಿಬಿಎಂಪಿಯಿಂದ ಲೈಸನ್ಸ್ ಪಡೆಯುವ ಅವಶ್ಯಕತೆ ಇಲ್ಲ. ಗ್ಯಾಸ್ ಸ್ಟೇಷನ್ ಆರಂಭಿಸುವ 1ನೆ ಬ್ಲಾಕ್, ಜಯನಗರದ ಟಿ.ಮರಿಯಪ್ಪ ರಸ್ತೆಯಲ್ಲಿ ದೇವಸ್ಥಾನವೊಂದು ಇದೆ. ಆದರೆ, ಆ ದೇವಸ್ಥಾನದಲ್ಲಿ ಪೂಜೆಯೇ ನಡೆಯುವುದಿಲ್ಲ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದರು.
ಬಿಬಿಎಂಪಿ ಪರ ವಾದಿಸಿದ್ದ ವಕೀಲರು, ಗ್ಯಾಸ್ ಸ್ಟೇಷನ್‌ಗಳನ್ನು ಆರಂಭಿಸುವಾಗ ಬಿಬಿಎಂಪಿಯಿಂದ ಕಡ್ಡಾಯವಾಗಿ ಲೈಸೆನ್ಸ್ ಪಡೆಯಬೇಕು. ಹಾಗೂ ಸ್ಥಳೀಯರಿಂದ ನಿರಾಕ್ಷೇಪಣಾ ಪತ್ರ(ಎನ್‌ಒಸಿ) ಪಡೆಯಬೇಕು. ಆದರೆ, ಈ ಯಾವ ನಿಯಮಗಳನ್ನು ಪಾಲಿಸದೆ ಸಿಪಾನಿ ಎನರ್ಜಿ ಲಿಮಿಟೆಡ್‌ನವರು ಗ್ಯಾಸ್ ಸ್ಟೇಷನ್ ಆರಂಭಿಸಿದ್ದಾರೆ ಎಂದು ವಾದಿಸಿದ್ದರು. ಎರಡು ಕಡೆ ವಕೀಲರ ವಾದ ಆಲಿಸಿದ್ದ ನ್ಯಾಯಪೀಠವು ಆದೇಶವನ್ನು ಕಾಯ್ದಿರಿಸಿತ್ತು. ಸೋಮವಾರ ಗ್ಯಾಸ್ ಸ್ಟೇಷನ್ ಆರಂಭಿಸಲು ಬಿಬಿಎಂಪಿಯಿಂದ ಲೈಸೆನ್ಸ್ ಕಡ್ಡಾಯವಾಗಿ ಪಡೆಯಬೇಕು. ಆದರೆ, ಗ್ಯಾಸ್ ಸ್ಟೇಷನ್ ಆರಂಭಿಸುವಾಗ ಸ್ಥಳೀಯರಿಂದ ನಿರಾಕ್ಷೇಪಣೆ ಪತ್ರ ಪಡೆಯುವ ಅವಶ್ಯಕತೆ ಇಲ್ಲ ಎಂದು ಆದೇಶದಲ್ಲಿ ತಿಳಿಸಿದೆ.







