ಇರಾಕ್‌ನಲ್ಲಿ ಸರಕಾರ ಬದಲಾವಣೆಯನ್ನು ಅಮೆರಿಕ ಎದುರು ನೋಡುತ್ತಿಲ್ಲ: ಟ್ರಂಪ್

ಟೋಕಿಯೊ (ಜಪಾನ್), ಮೇ 27: ಅಮೆರಿಕವು ಇರಾನ್‌ನಲ್ಲಿ ಸರಕಾರ ಬದಲಾವಣೆಯನ್ನು ಬಯಸುತ್ತಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಹೇಳಿದ್ದಾರೆ.
ಅಮೆರಿಕವು ವಿಮಾನ ವಾಹಕ ಯುದ್ಧನೌಕೆ, ಬಾಂಬರ್ ವಿಮಾನಗಳು ಮತ್ತು ಹೆಚ್ಚುವರಿ ಸೈನಿಕರನ್ನು ಕೊಲ್ಲಿ ವಲಯದಲ್ಲಿ ನಿಯೋಜಿಸಿದ ಬಳಿಕ ಉಭಯ ರಾಷ್ಟ್ರಗಳ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಟ್ರಂಪ್ ಈ ಮಾತುಗಳನ್ನು ಹೇಳಿದ್ದಾರೆ.
‘‘ಇರಾನ್‌ನ ತುಂಬಾ ಮಂದಿ ನನಗೆ ಗೊತ್ತು. ಅವರು ತುಂಬಾ ಒಳ್ಳೆಯವರು. ಇದೇ ನಾಯಕತ್ವದಲ್ಲಿ ಶ್ರೇಷ್ಠ ದೇಶವಾಗಲು ಇರಾನ್‌ಗೆ ಸಾಧ್ಯವಿದೆ’’ ಎಂದು ಜಪಾನ್ ರಾಜಧಾನಿ ಟೋಕಿಯೊದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವೇಳೆ ಟ್ರಂಪ್ ಹೇಳಿದರು. ಟ್ರಂಪ್ ಜಪಾನ್‌ನ ಅಧಿಕೃತ ಪ್ರವಾಸದಲ್ಲಿದ್ದಾರೆ.
‘‘ಸರಕಾರ ಬದಲಾವಣೆಯನ್ನು ನಾವು ಎದುರು ನೋಡುತ್ತಿಲ್ಲ, ಇದನ್ನು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ. ನಾವು ಪರಮಾಣು ಶಸ್ತ್ರಗಳ ಹುಡುಕಾಟದಲ್ಲೂ ಇಲ್ಲ’’ ಎಂದರು.
‘‘ನಾನು ಇರಾನನ್ನು ಘಾಸಿಗೊಳಿಸಲೂ ಬಯಸುವುದಿಲ್ಲ’’ ಎಂದರು.
ಇರಾನ್‌ನಿಂದ ಹೊಮ್ಮಿರುವ ‘ವಿಶ್ವಾಸಾರ್ಹ ಬೆದರಿಕೆ’ಗಳನ್ನು ಎದುರಿಸುವುದಕ್ಕಾಗಿ ಮಧ್ಯಪ್ರಾಚ್ಯಕ್ಕೆ 1,500 ಹೆಚ್ಚುವರಿ ಅಮೆರಿಕನ್ ಸೈನಿಕರನ್ನು ನಿಯೋಜಿಸುವುದಾಗಿ ಅಮೆರಿಕ ಶುಕ್ರವಾರ ಹೇಳಿರುವುದನ್ನು ಸ್ಮರಿಸಬಹುದಾಗಿದೆ.







