ರಾಹುಲ್ ಗಾಂಧಿ ಮನವೊಲಿಸಲು ಪ್ರಿಯಾಂಕಾ ಪ್ರಯತ್ನ

ಹೊಸದಿಲ್ಲಿ, ಮೆ 28: ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ತನ್ನ ಸಹೋದರ ಹಾಗೂ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಮಂಗಳವಾರ ಭೇಟಿಯಾಗಿ ಮಾತುಕತೆ ನಡೆಸಿದರು. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೀನಾಯವಾಗಿ ಸೋತ ಬಳಿಕ ಅಧ್ಯಕ್ಷ ಸ್ಥಾನ ತ್ಯಜಿಸಲು ಬಯಸಿರುವ ಸಹೋದರನ ಮನವೊಲಿಸಲು ಪ್ರಿಯಾಂಕಾ ಯತ್ನಿಸಿದರು. ಆದರೆ, ರಾಹುಲ್ ತನ್ನ ನಿಲುವನ್ನು ಬದಲಿಸದಿರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಪ್ರಿಯಾಂಕಾ ಅವರೊಂದಿಗೆ ರಾಜಸ್ಥಾನದ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಹಾಗೂ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲಾ ಕೂಡ ತೊಘಲಕ್ ಲೇನ್‌ನಲ್ಲಿರುವ ರಾಹುಲ್ ಗಾಂಧಿ ಅವರ ನಿವಾಸಕ್ಕೆ ಮಂಗಳವಾರ ಬೆಳಗ್ಗೆ ಭೇಟಿ ನೀಡಿದರು. ನಾಯಕತ್ವ ವಿಷಯದ ಕುರಿತು ಚರ್ಚಿಸಲು ಇನ್ನು ಮೂರ್ನಾಲ್ಕು ದಿನಗಳಲ್ಲಿ ಕಾರ್ಯಕಾರಿಣಿ ಸಮಿತಿ ಸಭೆ (ಸಿಡಬ್ಲುಸಿ)ನಡೆಯಲಿದೆ ಎಂಬ ವರದಿಯ ನಡುವೆ ರಾಹುಲ್ ಗಾಂಧಿ ಹಾಗೂ ಹಿರಿಯ ಕಾಂಗ್ರೆಸ್ ನಾಯಕರ ಮಧ್ಯೆ ಸಭೆ ನಡೆಯುತ್ತಿದೆ.
ಸಿಡಬ್ಲುಸಿ ಸಭೆ ಶೀಘ್ರದಲ್ಲಿ ನಡೆಯುವ ಯಾವುದೇ ಸಾಧ್ಯತೆಯನ್ನು ಕಾಂಗ್ರೆಸ್ ಅಲ್ಲಗಳೆದಿದೆ.
‘‘ಇಂತಹ ವರದಿಗಳಲ್ಲಿ ಹುರುಳಿಲ್ಲ’’ ಎಂದು ಸಂಘಟನಾ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಹೇಳಿದ್ದಾರೆ.