ನಿರ್ಜಲೀಕರಣದಿಂದ 64 ಸಾವಿರ ನವಜಾತ ಶಿಶುಗಳು ಆಸ್ಪತ್ರೆಗಳಿಗೆ ದಾಖಲು !
ತಾಪಮಾನ ವೈಪರೀತ್ಯ ಪರಿಣಾಮ; ಬೆಂಗಳೂರು, ಧಾರವಾಡದಲ್ಲಿ ಅಧಿಕ

ಬೆಂಗಳೂರು, ಮೇ 28: ರಾಜ್ಯದಲ್ಲಿ ಬಿಸಿಲಿನ ತಾಪಕ್ಕೆ ಬೆಂಗಳೂರು ಸೇರಿದಂತೆ ವಿವಿಧ ಕಡೆಗಳಲ್ಲಿ, 2018-19ನೆ ಸಾಲಿನಲ್ಲಿ ಸುಮಾರು 64 ಸಾವಿರಕ್ಕೂ ಅಧಿಕ ನವಜಾತ ಶಿಶುಗಳು ನಿರ್ಜಲೀಕರಣದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲುಗೊಂಡಿದ್ದು, ಆತಂಕವನ್ನು ಸೃಷ್ಟಿಸಿದೆ.
ರಾಜ್ಯದಾದ್ಯಂತ ತಾಪಮಾನ ವೈಪರೀತ್ಯದಿಂದಾಗಿ ಬಿಸಿಲು ಏರಿಕೆಯಾಗಿದ್ದು, ಇದರ ಪರಿಣಾಮ ನೇರವಾಗಿ ನವಜಾತ ಶಿಶುಗಳ ಮೇಲೆ ಬೀರಿದೆ. ಅಧಿಕ ಬಿಸಿಲಿನಿಂದಾಗಿ ಎಲ್ಲೆಡೆ ಬೆಳಗ್ಗೆಯಿಂದ ಸಂಜೆವರೆಗೂ ಬಿಸಿಗಾಳಿ ಬೀಸಿದೆ. ಬಿಸಿಲ ಝಳಕ್ಕೆ ನವಜಾತ ಶಿಶುಗಳಲ್ಲಿ ಹಲವು ಸಮಸ್ಯೆಗಳು ಕಂಡುಬಂದಿದ್ದು, ಆಸ್ಪತ್ರೆಗಳಿಗೆ ದಾಖಲಾಗುತ್ತಿರುವವರ ಸಂಖ್ಯೆ ಉಲ್ಬಣಗೊಳ್ಳುತ್ತಿದೆ.
ಕಾಣಿಸಿಕೊಂಡಿರುವ ಸಮಸ್ಯೆಗಳು: ನವಜಾತ ಶಿಶುಗಳಲ್ಲಿ ಹುಟ್ಟಿನಿಂದ ಬರುವ ಸೋಂಕು(ಮೇಜರ್ ಕಂಗೆನಿಟಲ್ ಮಾಲ್‌ಫಾರ್ಮೇಶನ್), ಹೆರಿಗೆ ಸಂದರ್ಭದಲ್ಲಿ ಉಸಿರಾಟದ ತೊಂದರೆ (ಮೋಡರೆಟ್ ಸೆವರ್ ಬರ್ತ್ ಆಫಿಕ್ಸಿಯಾ), ಉಸಿರಾಟದ ತೊಂದರೆ (ರೆಸ್ಪಿರ್ಯಾಟರಿ ಡಿಸ್ಟ್ರೆಸ್ ಸಿಂಡ್ರೋಮ್), ಗರ್ಭಾವಸ್ಥೆಯಲ್ಲಿನ ಸೋಂಕು (ಮೆಕೋನಿಯಮ್ ಆಸ್ಪಿರೇಶನ್ ಸಿಂಡ್ರೋಮ್), ಕಾಮಾಲೆ (ಜಾಂಡೀಸ್), ಕಡಿಮೆ ಉಷ್ಣಾಂಶ (ಹೈಪೋಥರ್ಮಿಯಾ) ಹಾಗೂ ಸಕ್ಕರೆ ಅಂಶ ಕೊರತೆ(ಹೈಪೊಗ್ಲಿಸೀಯಾ) ಸೇರಿದಂತೆ ಇನ್ನಿತರ ಸಮಸ್ಯೆಗಳು ಕಾಣಿಸಿಕೊಂಡಿವೆ. ರಾಜ್ಯದ ಹಲವು ಆಸ್ಪತ್ರೆಗಳಲ್ಲಿ ಜನಿಸಿ ನಿರ್ಜಲಿಕರಣದಿಂದ ಬಳಲುತ್ತಿರುವ ಶಿಶುಗಳನ್ನು ಆಯಾ ಜಿಲ್ಲೆಯ ಜಿಲ್ಲಾಸ್ಪತ್ರೆ ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಿಗೆ ದಾಖಲಾಗುತ್ತಿವೆ. ವಿಶೇಷ ನಿಗಾ ಘಟಕದಲ್ಲಿ (ಎಸ್‌ಎನ್‌ಸಿಯು) ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.
64,815 ನವಜಾತ ಶಿಶುಗಳು ಆಸ್ಪತ್ರೆಗೆ ದಾಖಲು: ಇದುವರೆಗೂ ರಾಜ್ಯಾದ್ಯಂತ ಸುಮಾರು 64,815 ನವಜಾತ ಶಿಶುಗಳು ಆಸ್ಪತ್ರೆಗಳಿಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಬೆಂಗಳೂರು ನಗರ, ಧಾರವಾಡ, ಬಳ್ಳಾರಿ, ಮೈಸೂರು, ರಾಯಚೂರು, ದಾವಣಗೆರೆ ಹಾಗೂ ಕಲಬುರಗಿ ಜಿಲ್ಲೆಗಳ ಶಿಶುಗಳಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ನಿರ್ಜಲೀಕರಣ ಸಮಸ್ಯೆ ಕಂಡುಬಂದಿರುವುದು ವರದಿಯಿಂದ ತಿಳಿದುಬಂದಿದೆ.
ಬೆಂಗಳೂರು ನಗರದ ಎಂ.ಸಿ. ವಾಣಿವಿಲಾಸ ಆಸ್ಪತ್ರೆ, ಕೆ.ಸಿ.ಜನರಲ್ ಆಸ್ಪತ್ರೆ, ಜಯನಗರ ಜಿಎಚ್, ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆ ಹಾಗೂ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ ಸೇರಿದಂತೆ ಇನ್ನಿತರೆಡೆ 10,705 ಶಿಶುಗಳು ದಾಖಲಾಗಿವೆ. ಧಾರವಾಡ ಜಿಲ್ಲಾಸ್ಪತ್ರೆ ಹಾಗೂ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಒಟ್ಟು 4,497 ಶಿಶುಗಳು ಚಿಕಿತ್ಸೆ ಪಡೆದುಕೊಂಡಿರುವುದು ವರದಿಯಾಗಿದೆ.
ನಿರ್ಜಲೀಕರಣ ಹರಡದಂತೆ ಮುಂಜಾಗ್ರತೆ: ನಿರ್ಜಲೀಕರಣದ ಶಿಶುಗಳು ವಿಪರೀತ ಅಳುತ್ತವೆ. ಒದ್ದೆ ಬಟ್ಟೆಯಿಂದ ಮೈ ಒರೆಸಬೇಕು. ಶಿಶುವಿಗೆ ಬಾಯಾರಿಕೆಯಾದಾಗ ನಿಯಮಿತವಾಗಿ ಎದೆ ಹಾಲು ಕುಡಿಸಬೇಕು. ದಿನಕ್ಕೆ ಕನಿಷ್ಠ 6ರಿಂದ 8 ಭಾರಿ ಮೂತ್ರ ವಿಸರ್ಜನೆ ಮಾಡಬೇಕು. ಬಾಣಂತಿಯರು ನಿಯಮಿತವಾಗಿ ನೀರಿನಾಂಶವುಳ್ಳ ಪದಾರ್ಥ ಸೇವಿಸಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.
ಪೋಷಕರೇ ಎಚ್ಚರ ವಹಿಸಲು ಸಲಹೆ: ನವಜಾತ ಶಿಶುಗಳ ಆರೈಕೆ ಕಡೆಗೆ ಪೋಷಕರು ಹೆಚ್ಚಿನ ಗಮನ ನೀಡಬೇಕು. ಆ ಮೂಲಕ ಮಕ್ಕಳಲ್ಲಿನ ನಿರ್ಜಲೀಕರಣ ತಡೆಯಲು ಮುಂದಾಗಬೇಕು. ಮಕ್ಕಳಿಗೆ ಬಿಸಿಲು ಹೆಚ್ಚು ತಾಗದಂತೆ ಜಾಗೃತಿ ವಹಿಸಬೇಕು. ಮಗು ಹುಟ್ಟಿದ ತಕ್ಷಣ ಅರ್ಧ ಗಂಟೆಯೊಳಗೆ ತಾಯಿ ಎದೆ ಹಾಲು ಉಣಿಸಬೇಕು. ಎದೆಹಾಲು ಹೊರತಾಗಿ ಬೇರೆ ಆಹಾರ ಪದಾರ್ಥ ಕೊಡಬಾರದು. ಶಿಶುಗಳಲ್ಲಿ ಉಷ್ಣಾಂಶ 31.8 ಡಿಗ್ರಿ ಹಾಗೂ ಸಕ್ಕರೆ ಅಂಶ 90 ಮಿ.ಗ್ರಾಮ್ ಇರಬೇಕು ಎಂದು ಹಿರಿಯ ವೈದ್ಯರೊಬ್ಬರು ಮಾಹಿತಿ ನೀಡಿದ್ದಾರೆ.
ಅತಿಯಾದ ಬೇಸಿಗೆಯಿಂದಾಗಿ ನವಜಾತ ಶಿಶುಗಳಲ್ಲಿ ನಿರ್ಜಲೀಕರಣ ಹರಡುತ್ತದೆ. ಈ ಸಂಬಂಧ ಶಿಶುಗಳ ಆರೈಕೆಗೆ ಪೋಷಕರು ಕ್ರಮ ವಹಿಸಬೇಕು. ನಾವು ಎಲ್ಲ ಜಿಲ್ಲಾ ಆಸ್ಪತ್ರೆಗಳಲ್ಲಿ ನವಜಾತ ಶಿಶುಗಳ ನಿರ್ಜಲೀಕರಣ ತಡೆಗೆ ಸೂಕ್ತ ಚಿಕಿತ್ಸಾ ವ್ಯವಸ್ಥೆ ಕಲ್ಪಿಸಲಾಗಿದೆ. ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
-ಡಾ. ಪ್ರಭುಗೌಡ, ಉಪನಿರ್ದೇಶಕರು, ಮಕ್ಕಳ ಆರೋಗ್ಯ ವಿಭಾಗ
ಯಾವ ಜಿಲ್ಲೆಯಲ್ಲಿ ಎಷ್ಟು ಶಿಶು ದಾಖಲು...
ಬೆಂಗಳೂರು ನಗರ-10,705
ಧಾರವಾಡ-4,497
ಮೈಸೂರು-4,169
ಬಳ್ಳಾರಿ-4,302
ರಾಯಚೂರು-3,677
ಕಲಬುರಗಿ-3,165
ಹಾಸನ-2,843
ಶಿವಮೊಗ್ಗ-2,789
ಮಂಡ್ಯ-2,240
ಬೆಳಗಾವಿ-2,162







