ಆಲ್ವಾರ್ ಸಾಮೂಹಿಕ ಅತ್ಯಾಚಾರ ಸಂತ್ರಸ್ತೆಗೆ ಕಾನ್ ಸ್ಟೇಬಲ್ ಹುದ್ದೆ ನೀಡಿದ ರಾಜಸ್ಥಾನ ಸರಕಾರ

ಜೈಪುರ್, ಮೇ 29: ಆಲ್ವಾರ್ ಸಾಮೂಹಿಕ ಅತ್ಯಾಚಾರ ಪ್ರಕರಣದ ಸಂತ್ರಸ್ತೆಯನ್ನು ಪೊಲೀಸ್ ಕಾನ್ ಸ್ಟೇಬಲ್ ಹುದ್ದೆಗೆ ನೇಮಕಾತಿಗೊಳಿಸಿ ರಾಜಸ್ಥಾನ ಸರಕಾರ ಆದೇಶ ಹೊರಡಿಸಿದೆ. ದಲಿತ ಸಮುದಾಯಕ್ಕೆ ಸೇರಿರುವ ಸಂತ್ರಸ್ತೆಯನ್ನು ಎಪ್ರಿಲ್ 26ರಂದು ಆಲ್ವಾರ್ ನ ಥಾನಾಗಜಿ ಪ್ರದೇಶದಲ್ಲಿ ಆಕೆಯ ಪತಿಯೆದುರೇ ಐದು ಮಂದಿ ಅತ್ಯಾಚಾರಗೈದಿದ್ದರು.
ಮಹಿಳೆಗೆ ಸದ್ಯದಲ್ಲಿಯೇ ನೇಮಕಾತಿ ಪತ್ರ ತಲುಪಲಿದೆ ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ(ಗೃಹ) ರಾಜೀವ ಸ್ವರೂಪ್ ಹೇಳಿದ್ದಾರೆ.
ಮಹಿಳೆ ತನ್ನ ಪತಿಯೊಂದಿಗೆ ಮೋಟಾರ್ ಸೈಕಲ್ ನಲ್ಲಿ ಸಾಗುತ್ತಿದ್ದಾಗ ಆರೋಪಿಗಳು ಅವರನ್ನು ತಡೆದು ನಿಲ್ಲಿಸಿ ರಸ್ತೆ ಬದಿಯ ಮರಳಿನ ದಿಣ್ಣೆಗೆ ಕರೆದುಕೊಂಡು ಹೋಗಿದ್ದರು. ಅಲ್ಲಿ ಮಹಿಳೆಯ ಪತಿಗೆ ಹಲ್ಲೆಗೈದು ಆತನನ್ನು ಕಟ್ಟಿ ಹಾಕಿ ಆತನೆದುರೇ ಆಕೆಯ ಮೇಲೆ ಅತ್ಯಾಚಾರವೆಸಗಿದ್ದರು. ಸುಮಾರು ಮೂರು ಗಂಟೆ ಇಬ್ಬರನ್ನೂ ದಿಗ್ಬಂಧನದಲ್ಲಿರಿಸಿ ನಂತರ ಅತ್ಯಾಚಾರಿಗಳು ಅವರನ್ನು ಬಿಡುಗಡೆಗೊಳಿಸಿದ್ದರು, ಆರನೇ ಆರೋಪಿ ಘಟನೆಯನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟಿದ್ದ.
ಆರಂಭದಲ್ಲಿ ಘಟನೆಯ ಬಗ್ಗೆ ಸುಮ್ಮನಿದ್ದ ದಂಪತಿ ನಂತರ ಆರೋಪಿಗಳು ಕರೆ ಮಾಡಿ ಹಣ ನೀಡದೇ ಇದ್ದರೆ ವೀಡಿಯೋ ಬಹಿರಂಗಗೊಳಿಸುವುದಾಗಿ ಬೆದರಿಸಿದಾಗ ಎಪ್ರಿಲ್ 30ರಂದು ಪೊಲೀಸ್ ದೂರು ದಾಖಲಿಸಿದ್ದರು.





