ಮೋದಿ ಪ್ರಮಾಣವಚನ ಕಾರ್ಯಕ್ರಮದಲ್ಲಿ ಭಾಗವಹಿಸಲ್ಲ: ಮಮತಾ ಬ್ಯಾನರ್ಜಿ
“54 ಕಾರ್ಯಕರ್ತರ ಹತ್ಯೆ ಎಂಬ ಬಿಜೆಪಿ ಆರೋಪ ಸಂಪೂರ್ಣ ಸುಳ್ಳು”

ಹೊಸದಿಲ್ಲಿ, ಮೇ 29: ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಹಿಂಸಾಚಾರದಲ್ಲಿ 54 ಕಾರ್ಯಕರ್ತರು ಮೃತಪಟ್ಟಿದ್ದಾರೆ ಎನ್ನುವ ಬಿಜೆಪಿ ಆರೋಪ ಸಂಪೂರ್ಣ ಸುಳ್ಳು ಎಂದಿರುವ ಪ.ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ‘ದಯವಿಟ್ಟು ಕ್ಷಮಿಸಬೇಕು, ಮೋದಿ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ” ಎಂದಿದ್ದಾರೆ.
ಬಂಗಾಳದಲ್ಲಿ ಹತ್ಯೆಯಾದ ಬಿಜೆಪಿ ಕಾರ್ಯಕರ್ತರ ಕುಟುಂಬಗಳನ್ನು ಆಹ್ವಾನಿಸಿರುವುದನ್ನು ಟೀಕಿಸಿರುವ ಅವರು, “ಕಾರ್ಯಕ್ರಮವು ಪ್ರಜಾಪ್ರಭುತ್ವವನ್ನು ಆಚರಿಸುವುದು ಆಗಿರಬೇಕು. ಅದನ್ನು ಯಾವುದೇ ಪಕ್ಷವು ರಾಜಕೀಯ ಲಾಭ ಗಳಿಸಲು ಬಳಸಬಾರದು” ಎಂದು ಮಮತಾ ಹೇಳಿದರು.
“ಅಭಿನಂದನೆಗಳು, ನೂತನ ಪ್ರಧಾನಿ ನರೇಂದ್ರ ಮೋದಿಯವರಿಗೆ. ಸಾಂವಿಧಾನಿಕ ಆಮಂತ್ರಣವನ್ನು ಸ್ವೀಕರಿಸುವುದು ಮತ್ತು ಕಾರ್ಯಕ್ರಮದಲ್ಲಿ ಭಾಗವಹಿಸುವುದು ನನ್ನ ಯೋಜನೆಯಾಗಿತ್ತು. ಬಂಗಾಳದಲ್ಲಿ ರಾಜಕೀಯ ಹಿಂಸಾಚಾರದಲ್ಲಿ 54 ಮಂದಿ ಮೃತಪಟ್ಟಿದ್ದಾರೆ ಎಂದು ಬಿಜೆಪಿ ಆರೋಪಿಸುತ್ತಿರುವುದಾಗಿ ಕಳೆದ ಒಂದು ಗಂಟೆಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ನೋಡುತ್ತಿದ್ದೇನೆ. ಇದು ಸಂಪೂರ್ಣ ತಪ್ಪು. ಬಂಗಾಳದಲ್ಲಿ ಯಾವುದೇ ರಾಜಕೀಯ ಹತ್ಯೆಗಳು ನಡೆದಿಲ್ಲ” ಎಂದವರು ಹೇಳಿದರು.







