ಬೆಳೆವಿಮೆ ಯೋಜನೆಗೆ ನೊಂದಾವಣಿಗೆ ಸೂಚನೆ
ಉಡುಪಿ, ಮೇ 29: ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ ಮುಖ್ಯ ಬೆಳೆಯಾದ ಮಳೆಯಾಶ್ರಿತ ಭತ್ತವನ್ನು ಗ್ರಾಮಪಂಚಾಯತ್ ಮಟ್ಟಕ್ಕೆ ಬೆಳೆ ವಿಮೆ ಯೋಜನೆಯಡಿ ನೋಂದಣಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ.
ಬೆಳೆ ವಿಮೆ ಯೋಜನೆಯಡಿ ಜಿಲ್ಲೆಯ ಎಲ್ಲಾ ಗ್ರಾಪಂಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಭತ್ತದ ಬೆಳೆಗೆ ಪ್ರತಿ ಹೆಕ್ಟರ್‌ಗೆ 55,000 ರೂ. ವಿಮಾ ಮೊತ್ತಕ್ಕೆ ಶೇ.2ರಂತೆ ಪ್ರತಿ ಹೆಕ್ಟರ್‌ಗೆ 1100 ರೂ. ವಿಮಾಕಂತನ್ನು ಪಾವತಿಸ ಬೇಕಾಗಿದೆ.
ರೈತರು ಬೆಳೆ ವಿಮೆ ಯೋಜನೆಯಡಿ ನೋಂದಣಿ ಮಾಡಿಸಿಕೊಳ್ಳಲು ಕೊನೆಯ ದಿನ ಜುಲೈ 31. ಬೆಳೆ ಸಾಲ ಪಡೆಯದ ರೈತರು ಪಹಣಿಪತ್ರ, ಖಾತೆ/ ಪಾಸ್ ಪುಸ್ತಕ, ಕಂದಾಯ ರಸೀದಿ ಮತ್ತು ಆಧಾರ್ ಸಂಖ್ಯೆಗಳನ್ನು ಒದಗಿಸಿ ಸ್ಥಳೀಯ ಸಾಲ ನೀಡುವ ವಾಣಿಜ್ಯ ಅಥವಾ ಗ್ರಾಮೀಣ ಮಟ್ಟದ ವ್ಯವಸಾಯ ಸೇವಾ ಸಹಕಾರ ಸಂಘಗಳನ್ನು ಸಂಪರ್ಕಿಸಿ ಬೆಳೆ ವಿಮೆಗೆ ನೋಂದಾಯಿಸಿಕೊಳ್ಳಬೇಕು.
ಬೆಳೆ ವಿಮಾ ಯೋಜನೆಯಿಂದ ರೈತರಿಗೆ ಅನೇಕ ಪ್ರಯೋಜನಗಳಿವೆ. ಅಧಿಸೂಚಿತ ಘಟಕದಲ್ಲಿ ಸಂಭವಿಸುವ ಹವಾಮಾನ ವೈಪರಿತ್ಯಗಳಾದ ಅಧಿಕ ಮಳೆ, ನೆರೆ/ಪ್ರವಾಹದಿಂದ ಬೆಳೆ ಮುಳುಗಡೆ, ದೀರ್ಘಕಾಲ ತೇವಾಂಶ ಕೊರತೆ, ತೀವ್ರ ಬರಗಾಲ ಮುಂತಾದವುಗಳಿಂದ ವಿಮೆ ಮಾಡಿದ ರೈತರಿಗೆ ಶೇ.25 ರಷ್ಟು ಬೆಳೆ ನಷ್ಟ ಪರಿಹಾರ ದೊರೆಯಲಿದೆ. ಅಲ್ಲದೇ ಪ್ರಕೃತಿ ವಿಕೋಪಗಳಾದ ಆಲಿಕಲ್ಲು ಮಳೆ, ಭೂಕುಸಿತ, ಬೆಳೆ ಮುಳುಗಡೆ, ಮೇಘಸ್ಪೋಟ ಹಾಗೂ ಗುಡುಗು ಮಿಂಚುಗಳಿಂದ ಉಂಟಾಗುವ ಬೆಂಕಿ ಅವಘಡಗಳಿಂದ ಬೆಳೆ ಹಾನಿಯಾದಲ್ಲಿ ವೈಯಕ್ತಿಕ ಪರಿಹಾರ ದೊರಕಲಿದೆ. ಕಟಾವಿನ ನಂತರದ ಬೆಳೆಯನ್ನು ಜಮೀನಿನಲ್ಲಿ ಒಣಗಲು ಬಿಟ್ಟ ಸಂದರ್ಭದಲ್ಲಿ (14 ದಿನಗಳ ಒಳಗೆ) ಚಂಡಮಾರುತ, ಅಕಾಲಿಕ ಮಳೆಯಿಂದ ಬೆಳೆ ನಾಶವಾದಲಿ್ಲ ವೈಯಕ್ತಿಕ ಪರಿಹಾರ ದೊರೆಯಲಿದೆ.
ಮಳೆ ಅಭಾವ ಅಥವಾ ಪ್ರತಿಕೂಲ ಹವಾಮಾನ ಪರಿಸ್ಥಿತಿಯಲ್ಲಿ ಅಧಿಸೂಚಿತ ಘಟಕದಲ್ಲಿ ಶೇ. 75ರಷ್ಟು ಬಿತ್ತನೆಯಾಗದಿದ್ದಲ್ಲಿ ವಿಮೆ ಮಾಡಿಸಿದ ರೈತರಿಗೆ ವಿಮಾ ಮೊತ್ತದ ಶೇ.25ರಷ್ಟು ಪರಿಹಾರ ದೊರಕಲಿದೆ. ಬೆಳೆ ಸಾಲ ಪಡೆಯದ ರೈತರು ಬಿತ್ತನೆ ಪೂರ್ವದಲ್ಲೇ ಬೆಳೆ ವಿಮೆಗೆ ಹೆಸರು ನೋಂದಾ ಯಿಸಿಕೊಳ್ಳಬಹುದು.
ಬೆಳೆ ಸಾಲ ಪಡೆದ ರೈತರಿಗೆ ಬೆಳೆ ವಿಮೆ ಕಡ್ಡಾಯವಾಗಿದೆ. ಹೆಚ್ಚಿನ ಮಾಹಿತಿಗೆ ಸ್ಥಳೀಯ ಕೃಷಿ ಇಲಾಖೆಯ ಕಚೇರಿಯನ್ನು ಸಂಪರ್ಕಿಸುವಂತೆ ಜಂಟಿ ಕೃಷಿ ನಿರ್ದೇಶಕರ ಪ್ರಕಟಣೆ ತಿಳಿಸಿದೆ.







