ಸಂಸದ ನಳಿನ್‌ಕುಮಾರ್ ರಿಂದ ತೊಕ್ಕೊಟ್ಟು, ಪಂಪ್‌ವೆಲ್ ಕಾಮಗಾರಿ ವೀಕ್ಷಣೆ

ಮಂಗಳೂರು, ಮೇ 29: ಸಂಸದರಾಗಿ ಮೂರನೇ ಬಾರಿಗೆ ಪುನರಾಯ್ಕೆಗೊಂಡ ನಳಿನ್ ಕುಮಾರ್ ತೊಕ್ಕೊಟ್ಟು ಮತ್ತು ಪಂಪ್‌ವೆಲ್ ಮೇಲ್ಸೇತುವೆ ಕಾಮಗಾರಿಗಳನ್ನು ಬುಧವಾರ ವೀಕ್ಷಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ನಳಿನ್‌ಕುಮಾರ್ ಕಟೀಲ್, ಗುತ್ತಿಗೆದಾರ ಕಂಪೆನಿಯ ಆರ್ಥಿಕ ಸಮಸ್ಯೆಯಿಂದ ಕಾಮಗಾರಿ ವಿಳಂಬವಾಗಿತ್ತು. ಫೆಬ್ರವರಿಯಲ್ಲಿ ಉನ್ನತ ಮಟ್ಟದ ಸಭೆ ನಡೆಸಿ, 55 ಕೋಟಿ ರೂ. ವ್ಯವಸ್ಥೆ ಮಾಡಿದ್ದೆವು. ಮುಂದೆ ಚುನಾವಣೆ ನೀತಿಸಂಹಿತೆ ಜಾರಿಯಾಗಿದ್ದರಿಂದ ಪರೀಶೀಲನೆ ಮಾಡಲು ಸಾಧ್ಯವಾಗಿರಲಿಲ್ಲ. ಇದೀಗ ಅಧಿಕಾರ ವಹಿಸುವ ಮುನ್ನವೇ ಪರೀಶೀಲನೆ ನಡೆಸುತ್ತಿದ್ದೇನೆ ಎಂದು ಹೇಳಿದರು.
ತೊಕ್ಕೊಟ್ಟು ಮೇಲ್ಸೇತುವೆ ಕಾಮಗಾರಿ ಮುಕ್ತಾಯ ಹಂತದಲ್ಲಿದೆ. ಜೂ.10ರಂದು ಸಂಚಾರಕ್ಕೆ ಮುಕ್ತವಾಗಲಿದೆ. ಉಳ್ಳಾಲಕ್ಕೆ ತೆರಳುವ ವಾಹನಗಳಿಗೆ ಸರಿಯಾದ ವ್ಯವಸ್ಥೆ ಕಲ್ಪಿಸುವಂತೆ ಹೆದ್ದಾರಿ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಿದ್ದೇನೆ. ಮೇಲ್ಸೇತುವೆ ಕಾಮಗಾರಿ ಸಂಪೂರ್ಣ ಗೊಂಡತೆಯೇ ಸರ್ವಿಸ್ ರಸ್ತೆಗಳ ಅಗಲೀಕರಣ ನಡೆಸಿ ಇತರ ಸಣ್ಣ ಪುಟ್ಟ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದರು.
ಪಂಪ್‌ವೆಲ್ ಬಳಿಯ ಅಂಡರ್‌ಪಾಸ್ ಕಾಮಗಾರಿ ಕೈಗೆತ್ತಿಕೊಂಡಿದ್ದು, ಒಂದು ಮುಗಿಸುತ್ತೇವೆ. ವಾರದಲ್ಲಿ ಸರ್ವಿಸ್ ರಸ್ತೆ ಮುಗಿಸಿ ಕೊಡುತ್ತೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಜುಲೈ ಅಂತ್ಯಕ್ಕೆ ಎಲ್ಲ ಕಾಮಗಾರಿ ಮುಗಿಸಿ, ಆಗಸ್ಟ್‌ಗೆ ಬಿಟ್ಟು ಕೊಡುವ ಎಲ್ಲ ಪ್ರಯತ್ನ ನಡೆಯುತ್ತಿದೆ. ಮುಂದೆ 10 ದಿನಕ್ಕೊಮ್ಮೆ ತಾನು ಪರಿಶೀಲನೆ ನಡೆಸುತ್ತೇನೆ ಎಂದು ಹೇಳಿದರು.
ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್ ಅಜಿತ್, ನವಯುಗ ಕಂಪನಿಯ ಮುಖ್ಯ ಯೋಜನಾ ನಿರ್ದೇಶಕ ಶಂಕರ್ ರಾವ್, ಮಾಜಿ ಕಾರ್ಪೊರೇಟರ್ ಸುಧೀರ್ ಶೆಟ್ಟಿ ಕಣ್ಣೂರು, ಪ್ರಭಾಮಾಲಿನಿ, ಜಗದೀಶ ಶೇಣವ, ಶರಣ್ ಪಂಪ್‌ವೆಲ್, ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು, ಸಂತೋಷ್ ಕುಮಾರ್ ಬೋಳಿಯಾರು, ಚಂದ್ರಹಾಸ್ ಉಳ್ಳಾಲ್ ಮತ್ತಿತರರಿದ್ದರು.
ಹೋರಾಟಗಾರರು ಮನೆಗೆ: ಸಂಸದ
ಎಂಟು ವರ್ಷಗಳಿಂದ ಕಾಮಗಾರಿ ನಡೆಯುತ್ತಿದ್ದರೂ ಮಾತನಾಡದವರು ಚುನಾವಣೆ ಸಂದರ್ಭ ಭಾರೀ ಹೋರಾಟ ಮಾಡಿದರು. ಪಾಪ ಅವರಿಗೆ ಚುನಾವಣೆಯಲ್ಲಿ ಕೆಲಸ ಮಾಡಲು ಸಮಯ ಸಿಗಲಿಲ್ಲ. ಅವರನ್ನು ಜನರು ಮನೆಗೆ ಕಳುಹಿಸಿದ್ದು, ಈಗ ಮನೆಯಿಂದ ಹೊರಗೆ ಬರಲಾರದ ಸ್ಥಿತಿಯಲ್ಲಿ ಇದ್ದಾರೆ ಎಂದು ನಳಿನ್‌ಕುಮಾರ್ ಕಟೀಲ್ ಟೀಕಿಸಿದರು.
ರಾಜ್ಯದ ಸಮ್ಮಿಶ್ರ ಸರಕಾರ ಕಚ್ಚಾಟದಲ್ಲಿ ತೊಡಗಿದ್ದು, ರಾಜ್ಯದ ಅಭಿವೃದ್ಧಿಯನ್ನು ಸಂಪೂರ್ಣ ಮರೆತಿದೆ. ಇದರ ಪರಿಣಾಮಕಾರಿ ಶಿರಾಡಿ, ಚಾರ್ಮಾಡಿ, ಆಗುಂಬೆ ಘಾಟ್ ರಸ್ತೆಗಳು ಅಪಾಯದ ಸ್ಥಿತಿಯಲ್ಲಿದೆ ಎಂದರು.
ಮಂಗಳೂರಿನ ಜನರು ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯ ಸರಕಾರ ಮಾತ್ರ ನೀರಿಲ್ಲದ ನದಿಯ ಮೂಲದಿಂದ ಎತ್ತಿನಹೊಳೆ ಯೋಜನೆ ಮಾಡಿ ಬಯಲು ಸೀಮೆಗೆ ನೀರು ತೆಗೆದುಕೊಂಡು ಹೋಗಲು ವ್ಯರ್ಥ ಹಣ ಸುರಿಯುತ್ತಿದ್ದಾರೆ. ಹಿಂದಿನ ಸರಕಾರವೇ ಶಿಲಾನ್ಯಾಸ ಮಾಡಿದ್ದರೂ ಇನ್ನೂ ಕೂಡ ಪೈಪ್ ಹಾಕಲು ಸಾಧ್ಯವಾಗಿಲ್ಲ. ಈಗಲೇ ಸಾವಿರಾರು ಕೋಟಿ ರೂ. ಮುಗಿಸಿದ ರಾಜ್ಯ ಸರಕಾರ ಹಣ ಖಾಲಿ ಮಾಡುತ್ತಿದೆಯೇ ಹೊರತು ಏನೂ ಆಗಿಲ್ಲ. ಆಗುವುದೂ ಇಲ್ಲ. ಇದು ಹಣ ದೋಚುವ ಯೋಜನೆ ಎಂದು ನಳಿನ್ ಹೇಳಿದರು.
ಬಯಲುಸೀಮೆಗೆ ನೀರು ಕೊಡುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ, ನಮ್ಮ ನೇತ್ರಾವತಿ ಹಾಗೂ ಪಶ್ಚಿಮಘಟ್ಟವನ್ನು ಹಾಳು ಮಾಡಿ ಯೋಜನೆ ಮಾಡುವುದಕ್ಕೆ ನನ್ನ ವಿರೋಧವಿದೆ. ಇದಕ್ಕಾಗಿ ಮತ್ತೊಮ್ಮೆ ಈ ಭಾಗದ ಹೋರಾಟಗಾರರೊಂದಿಗೆ ಕುಳಿತುಕೊಂಡು ಯೋಜನೆ ವಿರೋಧಿಸಿ ಮಾಡುವ ಎಲ್ಲ ಹೋರಾಟಗಳಿಗೂ ನನ್ನ ಬೆಂಬಲವನ್ನು ಸೂಚಿಸಲಾಗುವುದು ಎಂದರು.
‘ಖಾದರ್ ತಾಕತ್ತು ಪ್ರದರ್ಶಿಸಲಿ’
ಪ್ರಧಾನಿ ಮೋದಿ ಅವರು ಈ ಬಾರಿ 15 ಲಕ್ಷ ರೂ. ಜನರ ಖಾತೆಗೆ ಹಾಕಲಿ ಎಂಬ ಸಚಿವ ಖಾದರ್ ಹೇಳಿಕೆ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ನಳಿನ್, ‘ಮೋದಿ ಅವರು ಏನು ಮಾಡಿದ್ದಾರೆ ಎಂಬುದಕ್ಕೆ ಸ್ಪಷ್ಟ ತೀರ್ಪು ಜನರು ನೀಡಿದ್ದಾರೆ. ಖಾದರ್ ಅವರು ದೇಶದ, ರಾಜ್ಯದ ವಿಷಯ ಮಾತನಾಡುವ ಮುನ್ನ ಮಂಗಳೂರಿನಲ್ಲಿ ಜನರು ನೀರಿಲ್ಲದೆ ಸಮಸ್ಯೆ ಅನುಭವಿಸುವ ಈ ಕಾಲದಲ್ಲಿ ಹೆಚ್ಚುವರಿಯಾಗಿ 10 ಟ್ಯಾಂಕರ್ ನೀರು ಕೊಡುವ ತಾಕತ್ತು ಪ್ರದರ್ಶಿಸಲಿ. ನೀರಿನ ಸಮಸ್ಯೆ ಮುಗಿದ ಬಳಿಕ 15 ಲಕ್ಷದ ಬಗ್ಗೆ ನೋಡೋಣ’ ಎಂದರು.







