ಕಂಪ್ಲಿ ಶಾಸಕ ಗಣೇಶ್ ಅಮಾನತು ಹಿಂಪಡೆದ ಕಾಂಗ್ರೆಸ್

ಬೆಂಗಳೂರು, ಮೇ 29: ಕಂಪ್ಲಿ ವಿಧಾನಸಭಾ ಕ್ಷೇತ್ರದ ಶಾಸಕ ಗಣೇಶ್‌ಗೆ ವಿಧಿಸಲಾಗಿದ್ದ ಅಮಾನತನ್ನು ಮಹತ್ವದ ಬೆಳವಣಿಗೆಯೊಂದರಲ್ಲಿ ರಾಜ್ಯ ಕಾಂಗ್ರೆಸ್ ಬುಧವಾರ ಹಿಂಪಡೆದಿದೆ.
ಎಐಸಿಸಿ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಸಮಾಲೋಚನೆ ನಡೆಸಿ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಕಾಂಗ್ರೆಸ್ ತಿಳಿಸಿದೆ. ಸದ್ಯ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ಅನುಭವಿಸಿದ್ದು, ಎಲ್ಲರನ್ನೂ ವಿಶ್ವಾಸಕ್ಕೆ ಪಡೆಯುವ ಪ್ರಯತ್ನ ನಡೆಸುತ್ತಿದೆ. ಅದರ ಭಾಗವಾಗಿ ಬುಧವಾರ ಗಣೇಶ್ ವಿರುದ್ಧದ ಅಮಾನತು ಹಿಂಪಡೆಯಲಾಗಿದೆ.
ಕೆಲ ತಿಂಗಳ ಹಿಂದೆ ಬಿಡದಿಯ ಈಗಲ್ಟನ್ ರೆಸಾರ್ಟ್‌ನಲ್ಲಿ ಕಾಂಗ್ರೆಸ್ ಪಕ್ಷದ ಅನೌಪಚಾರಿಕ ಶಾಸಕಾಂಗ ಸಭೆ ನಡೆದಿತ್ತು. ಈ ವೇಳೆ ಶಾಸಕ ಆನಂದಸಿಂಗ್ ಮತ್ತು ಗಣೇಶ್ ನಡುವೆ ಹೊಡೆದಾಟ ಸಂಭವಿಸಿತ್ತು. ಈ ಘಟನೆ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಮುಜುಗರ ಉಂಟು ಮಾಡಿದ್ದ ಹಿನ್ನೆಲೆಯಲ್ಲಿ ಗಣೇಶ್ ಅವರನ್ನು ಪಕ್ಷ ಅಮಾನತು ಮಾಡಿತ್ತು. ಅಲ್ಲದೆ, ಆಂತರಿಕ ವಿಚಾರಣೆಯನ್ನೂ ನಡೆಸಿತ್ತು. ನಂತರದಲ್ಲಿ ಗಣೇಶ್ ಬಂಧನ, ಸೆರೆವಾಸ, ಬಿಡುಗಡೆಯಂತಹ ಬೆಳವಣಿಗೆಗಳೂ ನಡೆದಿದ್ದವು.







