ಮೋದಿ ನಿಸ್ವಾರ್ಥಿ, ದೇಶ ಪ್ರೇಮಿ: ಪ್ರಧಾನಿಯನ್ನು ಹೊಗಳಿದ ಸಚಿವ ಜಿ.ಟಿ.ದೇವೇಗೌಡ

ಬೆಳಗಾವಿ, ಮೇ 29: ಪ್ರಧಾನಿ ನರೇಂದ್ರ ಮೋದಿ ನಿಸ್ವಾರ್ಥಿ ಹಾಗೂ ದೇಶ ಪ್ರೇಮಿ. ಈ ಕಾರಣದಿಂದಲೇ ಅವರಿಗೆ ಎರಡನೆ ಬಾರಿ ಪ್ರಧಾನಿ ಆಗುವ ಯೋಗ ಬಂದಿದೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಹೇಳಿದ್ದಾರೆ.
ಬುಧವಾರ ನಗರದ ವಿಟಿಯು ಆವರಣದಲ್ಲಿ ನಡೆದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 7ನೇ ಘಟಿಕೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮೋದಿ ಅವರಿಗೆ ದೇಶದ ಬಗ್ಗೆ ಸಾಕಷ್ಟು ಗೌರವ, ಅಭಿಮಾನವಿದೆ ಎಂದರು. ಪ್ರಧಾನಿಯಾಗಿದ್ದರೂ ತಾನು ಕೂಡ ಓರ್ವ ಸಂಸದ ಎನ್ನುವಷ್ಟರ ಮಟ್ಟಿಗೆ ಅವರು ಸರಳತೆ ಮೈಗೂಡಿಸಿಕೊಂಡಿದ್ದಾರೆ. ವೈಯಕ್ತಿಕ ಹಿತಾಸಕ್ತಿ ಇಲ್ಲದೆ, ತಮಗಾಗಿ ಏನು ಮಾಡಿಕೊಳ್ಳದೆ, ದೇಶಕ್ಕಾಗಿ ತಮ್ಮ ಜೀವನವನ್ನು ಸಮರ್ಪಿಸಿಕೊಂಡಿದ್ದಾರೆ ಎಂದು ಜಿ.ಟಿ.ದೇವೇಗೌಡ ತಿಳಿಸಿದರು.
ನರೇಂದ್ರಮೋದಿಯ ಈ ಗುಣವು ಯುವಕರನ್ನು ದೇಶಸೇವೆಗೆ ಸಮರ್ಪಿಸಿಕೊಳ್ಳುವಂತೆ ಪ್ರೇರೇಪಣೆ ನೀಡಿದೆ. ದೇಶದ ಜನತೆಯ ಪ್ರೀತಿಯನ್ನು ಗಳಿಸುವಲ್ಲಿ ನರೇಂದ್ರಮೋದಿ ಸಫಲವಾಗಿದ್ದಾರೆ. ನಾವು ಅವರಿಂದ ಸಾಕಷ್ಟು ಕಲಿಯಬೇಕಿದೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಮೈತ್ರಿ ಸರಕಾರ ಅತಂತ್ರಗೊಳಿಸುವ ಉದ್ದೇಶ ನರೇಂದ್ರಮೋದಿಗಿಲ್ಲ. ರಾಜ್ಯದ ಬಿಜೆಪಿ ನಾಯಕರಿಗೂ ಈ ಬಗ್ಗೆ ಸೂಚನೆ ನೀಡಿಲ್ಲ. ಲೋಕಸಭಾ ಚುನಾವಣೆಯ ಬಳಿಕ ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಮೋದಿ ಮಾಡಿದ ಭಾಷಣದಲ್ಲಿ, ಎಲ್ಲರೂ ಒಂದಾಗಿ ದೇಶದ ಅಭಿವೃದ್ಧಿಯ ಕೆಲಸ ಮಾಡೋಣ ಎಂದಿದ್ದಾರೆ ಎಂದು ದೇವೇಗೌಡ ಹೇಳಿದರು.
ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಲೋಕಸಭಾ ಚುನಾವಣೆಯ ಮೊದಲೇ ಒಂದಾಗಿರಬೇಕಿತ್ತು. ಫಲಿತಾಂಶದ ಬಳಿಕ ಅವರ ನಿವಾಸಕ್ಕೆ ಇವರು, ಇವರ ನಿವಾಸಕ್ಕೆ ಅವರು ಹೋಗುತ್ತಿದ್ದಾರೆ. ಮೊದಲೇ ರೀತಿ ಹೊಂದುಕೊಂಡು ಹೋಗಿದ್ದರೆ, ರಾಜ್ಯ ಸರಕಾರದ ಮೇಲೆ ಜನತೆಗೆ ಹೆಚ್ಚಿನ ವಿಶ್ವಾಸ ಬರುತ್ತಿತ್ತು ಎಂದು ದೇವೇಗೌಡ ತಿಳಿಸಿದರು.
ಅಲ್ಲದೇ, ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಪಕ್ಷಗಳು ಹೆಚ್ಚಿನ ಸ್ಥಾನ ಗೆಲ್ಲಲು ಸಹಕಾರಿಯಾಗುತಿತ್ತು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಂತಹ ಹಿರಿಯರು ಸಂಸತ್ತಿನಲ್ಲಿ ಇರಬೇಕು. ಅವರ ಸೋಲು ಬೇಸರ ತರಿಸಿದೆ ಎಂದು ಅವರು ಹೇಳಿದರು.
ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಸಂಘಟಿಸುವ ಕೆಲಸವಾಗಬೇಕಿದೆ. ಸಮ್ಮಿಶ್ರ ಸರಕಾರವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಅಗತ್ಯವಿದ್ದಲ್ಲಿ ನಾನು ಸಚಿವ ಸ್ಥಾನ ಬಿಟ್ಟುಕೊಡಲು ಸಿದ್ಧನಿದ್ದೇನೆ. ಕೆಲವರು ಸಚಿವ ಸ್ಥಾನ ಬಿಟ್ಟುಕೊಟ್ಟು, ಅತೃಪ್ತರಿಗೆ ಸಚಿವ ಸ್ಥಾನ ನೀಡುವ ಚಿಂತನೆ ನಡೆದಿದೆ ಎಂದು ದೇವೇಗೌಡ ತಿಳಿಸಿದರು.







