ಮಗು ಕೊಲೆ ಪ್ರಕರಣಕ್ಕೆ ಹೊಸ ತಿರುವು: ಪುತ್ರಿಯನ್ನು ಉಸಿರುಗಟ್ಟಿಸಿ ಹತ್ಯೆಗೈದ ತಂದೆ
ವಿಚಾರಣೆ ವೇಳೆ ತಪ್ಪೊಪ್ಪಿಕೊಂಡ ಆರೋಪಿ

ಮಂಗಳೂರು, ಮೇ 29: ನಗರದ ಬೋಳಾರ ಸಮೀಪ ನೇತ್ರಾವತಿ ನದಿ ದಡದಲ್ಲಿ ಸೋಮವಾರ ಎಂಟು ತಿಂಗಳ ಹೆಣ್ಣುಮಗುವಿನ ಮೃತದೇಹ ಪತ್ತೆಯಾದ ಪ್ರಕರಣ ಹೊಸ ತಿರುವು ಪಡೆದಿದ್ದು, ಸ್ವತಃ ತಂದೆಯೇ ಪುತ್ರಿಯನ್ನು ಕೊಲೆ ಮಾಡಿದ ಪ್ರಕರಣ ಇದಾಗಿದೆ.
ಈ ಬಗ್ಗೆ ಆರೋಪಿ, ಹೆಣ್ಣು ಮಗುವಿನ ತಂದೆ ಕೊಪ್ಪಳ ಮೂಲದ, ಪ್ರಸ್ತುತ ಬೋಳಾರದಲ್ಲಿ ವಾಸವಿರುವ ಲಕ್ಷ್ಮಣ ತೆಂಗಿನಹಾಳ ಎಂಬಾತನನ್ನು ಬುಧವಾರ ಪೊಲೀಸರು ಬಂಧಿಸಿದ್ದಾರೆ. ಆತನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಲಕ್ಷ್ಮಣ ತೆಂಗಿನಹಾಳ ಮತ್ತು ರೂಪಾ ಅವರ ಪುತ್ರಿ ಮೌನಶ್ರೀ ಮೃತದೇಹ ಬೋಳಾರ ಸಮೀಪ ನೇತ್ರಾವತಿ ನದಿ ತೀರದಲ್ಲಿ ಸೋಮವಾರ ಪತ್ತೆಯಾಗಿತ್ತು.
ಈ ದಂಪತಿ ಬೋಳಾರದಲ್ಲಿರುವ ಕಟ್ಟಡ ನಿರ್ಮಾಣ ಸಂಸ್ಥೆಯೊಂದರ ತಾತ್ಕಾಲಿಕ ಶೆಡ್‌ನಲ್ಲಿ ಮಗುವಿನೊಂದಿಗೆ ವಾಸವಾಗಿತ್ತು. ಲಕ್ಷ್ಮಣ ಮಂಗಳೂರಿನ ಕಟ್ಟಡವೊಂದರಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದು, ಮೇ 27ರಂದು ಅನಾರೋಗ್ಯದ ಹಿನ್ನೆಲೆಯಲ್ಲಿ ಕೆಲಸಕ್ಕೆ ಹೋಗದೆ ಮನೆಯಲ್ಲೇ ಉಳಿದುಕೊಂಡಿದ್ದನು. ಪತ್ನಿ ಮಗುವನ್ನು ಬೆಳಗ್ಗೆ 8 ಗಂಟೆಗೆ ಮನೆಯಲ್ಲೇ ಬಿಟ್ಟು ಕೆಲಸಕ್ಕೆ ತೆರಳಿದ್ದರು. ತಾನು ಸುಮಾರು 11 ಗಂಟೆಯ ವೇಳೆಗೆ ಮಗುವನ್ನು ಜೋಳಿಗೆಯಲ್ಲಿ ಮಲಗಿಸಿ ಹೊರಗೆ ಹೋಗಿದ್ದು ಮಧ್ಯಾಹ್ನ 12:15ಕ್ಕೆ ಮರಳಿ ಬಂದಾಗ ಮಗು ಕಾಣೆಯಾಗಿತ್ತು ಎಂದು ಪತ್ನಿಯಲ್ಲಿ ತಿಳಿಸಿದ್ದನು. ಮಗುವಿಗಾಗಿ ಹುಡುಕಾಟ ನಡೆಸುತ್ತಿದ್ದಾಗ ಸಂಜೆ 5 ಗಂಟೆಯ ವೇಳೆಗೆ ಬೋಳಾರ ಬದಿಯ ನೇತ್ರಾವತಿ ನದಿ ದಡದಲ್ಲಿ ಮಗುವಿನ ಮೃತದೇಹ ಪತ್ತೆಯಾಗಿತ್ತು.
ಮಗುವಿನ ಹಣೆಯ ಎರಡೂ ಬದಿ ತರಚಿದ ಗಾಯ, ಮೂಗಿನ ಬದಿ ಉಗುರಿನ ಗಾಯದ ಗುರುತುಗಳಿರುವುದು ಕಂಡು ಬಂದಿದ್ದು, ಮಗುವನ್ನು ಉಸಿರುಗಟ್ಟಿಸಿ ಕೊಲೆಗೈದಿರಬಹುದು ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದರು. ಈ ಕುರಿತು ಮಂಗಳೂರು ದಕ್ಷಿಣ (ಪಾಂಡೇಶ್ವರ) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಬಗ್ಗೆ ಲಕ್ಷ್ಮಣನನ್ನು ವಶಕ್ಕೆ ಪಡೆದು ಕೂಲಂಕುಷ ವಿಚಾರಣೆ ನಡೆಸಿದಾಗ ಆತ ಸತ್ಯ ಸಂಗತಿಯ ಬಗ್ಗೆ ಬಾಯಿ ಬಿಟ್ಟಿದ್ದು, ತಾನೇ ಉಸಿರು ಕಟ್ಟಿಸಿ ಸಾಯಿಸಿ ನದಿ ನೀರಿಗೆ ಎಸೆದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳೂರು ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ನಿರ್ದೇಶನದಂತೆ ಡಿಸಿಪಿಗಳಾದ ಹನುಮಂತರಾಯ, ಲಕ್ಷ್ಮೀಗಣೇಶ್, ಮಂಗಳೂರು ಕೇಂದ್ರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಸುಧೀರ್ ಹೆಗ್ಡೆ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಎನ್.ಕುಮಾರ್ ಆರಾಧ್ಯ, ಪೊಲೀಸ್ ಉಪ ನಿರೀಕ್ಷ ರಾಜೇಂದ್ರ ಬಿ., ಎಲ್.ಮಂಜುಳಾ ಹಾಗೂ ದಕ್ಷಿಣ ಠಾಣೆಯ ಸಿಬ್ಬಂದಿ ಪಾಲ್ಗೊಂಡಿದ್ದರು.
ಹೆಣ್ಣುಮಕ್ಕಳ ಬಗ್ಗೆ ತಾತ್ಸಾರ ಕಾರಣ
ಲಕ್ಷ್ಮಣನಿಗೆ ಹೆಣ್ಣು ಮಕ್ಕಳನ್ನು ಕಂಡರೆ ಆಗದು; ಬಹಳಷ್ಟು ತಾತ್ಸಾರ ಹೊಂದಿದ್ದನು. ಹಾಗಾಗಿ ಪುತ್ರಿಯನ್ನು ಕೊಲೆ ಮಾಡಿದ್ದಾನೆ. ಆತನಿಗೆ ಇಬ್ಬರು ಮಕ್ಕಳು; ಇಬ್ಬರೂ ಪುತ್ರಿಯರು. ಹಿರಿಯ ಪುತ್ರಿಗೆ ಆತ ಬಹಳಷ್ಟು ಹೊಡೆಯುತ್ತಿದ್ದನು ಎಂದು ವಿಚಾರಣೆಯಿಂದ ತಿಳಿದುಬಂದಿದೆ.







