ಕುವೈತ್ ನಲ್ಲಿ ಅತಂತ್ರ ಸ್ಥಿತಿಯಲ್ಲಿ ಯುವಕರು: ಮಾಣಿಕ್ಯ ಅಸೋಸಿಯೇಟ್ಸ್‌ನಿಂದ ಸ್ಪಷ್ಟನೆ
ಮಂಗಳೂರು, ಮೇ 29: ಉದ್ಯೋಗಕ್ಕಾಗಿ ಕುವೈತ್ ಗೆ ತೆರಳಿದ ಮಂಗಳೂರು ಮೂಲದ 35 ಮಂದಿ ಯುವಕರು ಅತಂತ್ರ ಸ್ಥಿತಿಯಲ್ಲಿರುವ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರಿನ ಮಾಣಿಕ್ಯ ಅಸೋಸಿಯೇಟ್ಸ್ ಬುಧವಾರ ಮಾಧ್ಯಮಗಳಿಗೆ ಸ್ಪಷ್ಟೀಕರಣ ನೀಡಿದೆ.
ಕುವೈತ್ ನ ಅಸ್‌ಪೆಕ್ಟ್ ಪೆಟ್ರೋಲಿಯಂ ಸರ್ವಿಸಸ್ ಕಂಪೆನಿಯ ಉದ್ಯೋಗಕ್ಕೂ ಮಾಣಿಕ್ಯ ಅಸೋಸಿಯೇಟ್ಸ್ ಸಂಸ್ಥೆಗೂ ಯಾವುದೇ ಸಂಬಂಧ ಇಲ್ಲ ಎಂದು ತಿಳಿಸಿದೆ.
ಬುಧವಾರ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸಂಸ್ಥೆಯ ಪ್ರಸಾದ್ ಶೆಟ್ಟಿ ಅವರು ‘ಮಾಣಿಕ್ಯ ಅಸೋಸಿಯೇಟ್ಸ್ ಸಂಸ್ಥೆಯು 58 ಜನರಿಗೆ ಉದ್ಯೋಗ ನಿಮಿತ್ತ ಮುಂಬೈಯ ಹಾಕ್ ಕನ್ಸಲ್ಟೆನ್ಸಿ ಪ್ರೈ.ಲಿ. ಸಂಸ್ಥೆಗೆ ಕಳುಹಿಸಿಕೊಡಲಾಗಿತ್ತು. ಮುಂಬೈಯ ಸಂಸ್ಥೆಯು ಆ 58 ಜನರಿಗೆ ಕುವೈತ್ ನಲ್ಲಿ ಅಸ್‌ಪೆಕ್ಟ್ ಪೆಟ್ರೋಲಿಯಂ ಸರ್ವಿಸಸ್ ಕಂಪೆನಿಯಲ್ಲಿ ಉದ್ಯೋಗದ ವ್ಯವಸ್ಥೆ ಮಾಡಿತ್ತು. ಮಾಣಿಕ್ಯ ಅಸೋಸಿಯೇಟ್ಸ್ ಸಂಸ್ಥೆಯು ಹಾಕ್ ಕನ್ಸಲ್ಟೆನ್ಸಿ ಪ್ರೈ.ಲಿ.ನವರಿಗೆ ಉದ್ಯೋಗ ಆಕಾಂಕ್ಷಿಗಳನ್ನು ಸಂಪರ್ಕಿಸುವ ಒಂದು ಕೊಂಡಿಯಾಗಿ ಕೆಲಸ ಮಾಡಿರುತ್ತಾರೆ. ಹೀಗಾಗಿ ಮಂಗಳೂರಿನ ಮಾಣಿಕ್ಯ ಸಂಸ್ಥೆಗೂ ಕುವೈತ್ ನ ಕಂಪೆನಿಗೂ ಸಂಬಂಧವಿಲ್ಲ. ಆದರೂ, ಮಾನವೀಯತೆಯ ದೃಷ್ಟಿಯಿಂದ ಸಂತ್ರಸ್ತರೆಂದು ಎನ್ನಲಾದ 35 ಮಂದಿಯನ್ನು ಭಾರತಕ್ಕೆ ಕರೆತರಲು ಬೇಕಾದ ಸಹಾಯವನ್ನು ಮಾಡಲು ತಯಾರಿದ್ದೇವೆ ಎಂದು ಪ್ರಸಾದ್ ಶೆಟ್ಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.





