ಎಸ್ಸಿಪಿ-ಟಿಎಸ್ಪಿ ಯೋಜನೆ ವಿಫಲವಾದರೆ ಅಧಿಕಾರಿಗಳು ಹೊಣೆ: ಬೆಳಗಾವಿ ಡಿಸಿ ಡಾ.ವಿಶಾಲ್
ಬೆಳಗಾವಿ, ಮೇ 29: ವಿಶೇಷ ಘಟಕ ಯೋಜನೆ(ಎಸ್ಸಿಪಿ) ಹಾಗೂ ಗಿರಿಜನ ಉಪ ಯೋಜನೆ(ಟಿಎಸ್ಪಿ)ಯಡಿ ನೀಡಲಾಗುವ ಕಾರ್ಯಕ್ರಮ ಹಾಗೂ ಕಾಮಗಾರಿಗಳು ಶೇ.100ರಷ್ಟು ಪ್ರಗತಿ ಸಾಧಿಸಬೇಕು. ಒಂದು ವೇಳೆ ಕಳಪೆ ಸಾಧನೆ ಕಂಡುಬಂದರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ವಿಶಾಲ್ ಎಚ್ಚರಿಕೆ ನೀಡಿದರು.
ಬುಧವಾರ ನಡೆದ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿ ಇಲಾಖೆಯು ಎಸ್ಸಿಪಿ, ಟಿಎಸ್ಪಿ ಫಲಾನುಭವಿಗಳನ್ನು ಆಯ್ಕೆ ಮಾಡುವಾಗ ಅರ್ಜಿಗಳನ್ನು ಕಡ್ಡಾಯವಾಗಿ ಆಹ್ವಾನಿಸಬೇಕು. ಅರ್ಹರ ಪಟ್ಟಿಯನ್ನು ಅಗತ್ಯವಿದ್ದರೆ ಶಾಸಕರ ಅವಗಹನೆಗೆ ತಂದು ಆಯ್ಕೆ ಪ್ರಕ್ರಿಯೆ ನಡೆಸಬೇಕು ಎಂದು ಅವರು ಹೇಳಿದರು.
ಬಾಕಿ ಉಳಿದಿರುವ ಕಾಮಗಾರಿಗಳನ್ನು ತಕ್ಷಣವೇ ಪೂರ್ಣಗೊಳಿಸಬೇಕು. ಅದೇ ರೀತಿ ಪ್ರಸಕ್ತ ಸಾಲಿನಲ್ಲಿ ಆದ್ಯತೆ ಮೇರೆಗೆ ಕ್ರಿಯಾಯೋಜನೆಯನ್ನು ರೂಪಿಸಿ ಅನುಮೋದನೆ ಪಡೆದುಕೊಳ್ಳಬೇಕು. ಅನುದಾನ ಬಿಡುಗಡೆಗೆ ಕಾಯದೆ ಅನುಮೋದಿತ ಕ್ರಿಯಾಯೋಜನೆಯ ಪ್ರಕಾರ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಆರಂಭಿಸಬೇಕು ಎಂದು ಅವರು ಹೇಳಿದರು.





